ನೇಕಾರ ಸಂಘಟನೆಗಳು ಒಗ್ಗಟ್ಟಾಗಬೇಕು: ಶೇಖಾ

0
22
loading...

ಗುಳೇದಗುಡ್ಡ: ನೇಕಾರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ನೇಕಾರರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಿಕೊಡಲು ಸಾಧ್ಯವಾಗುತ್ತದೆ. ನೇಕಾರ ಸಂಘಟನೆಗಳಿಗೆ ನಾಯಕತ್ವದ ಕೊರತೆ ಇಲ್ಲ ಆದರೆ ಅವರಿಗೆ ಆರ್ಥಿಕ ಬೆಂಬಲ ಇಲ್ಲ. ನಾವು ಆರ್ಥಿಕವಾಗಿ ಬಲಗೊಳ್ಳಬೇಕು ಅಂದಾಗ ಮಾತ್ರ ಹೋರಾಟಗಳನ್ನು ಸಂಘಟಿಸಲು ಸಾಧ್ಯವಾಗುತ್ತದೆ ಎಂದು ನೇಕಾರ ಮುಖಂಡ ಚಂದ್ರಕಾಂತ ಶೇಖಾ ಹೇಳಿದರು.  ಅವರು ಇತ್ತೀಚೆಗೆ ಇಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ನೇಕಾರರ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿ, ನೇಕಾರರ ಹೆಸರಿನ ಸಂಘಟನೆಗಳು ಸಾಕಷ್ಟು ಹುಟ್ಟಿಕೊಂಡಿವೆ. ಇಂಥಹ ಒಂದೊಂದು ಸಂಘಟನೆಗಳು ಒಂದೊಂದು ಪಕ್ಷದ ಮುಖವಾಣಿಯಾಗುತ್ತಿವೆ. ಇದರಿಂದ ನೇಕಾರರ ಸಂಘಟನೆಗಳಲ್ಲಿ ಒಗ್ಗಟ್ಟು ಮೂಡುವುದಿಲ್ಲ ಎಂದರು.  ಕೆಎಚ್‌ಡಿಸಿ ನಿಗಮದ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ನೇಕಾರರ ಹೆಸರಿನಲ್ಲಿ ಅನೇಕ ಸಂಘಟನೆಗಳನ್ನು ಮಾಡುವುದಕ್ಕಿಂತ ಈಗಿರುವ ನೇಕಾರರ ಒಕ್ಕೂಟದಡಿಯಲ್ಲಿ ವಿವಿಧ ಶಾಖೆಗಳನ್ನು ಮಾಡುವುದು ಒಳ್ಳೆಯದು. ನೇಕಾರರು ಒಗ್ಗಟ್ಟಾಗಿದ್ದಾಗ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.    ಕರ್ನಾಟಕ ನೇಕಾರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್‌.ಎಸ್‌. ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ನೇಕಾರರ ಹೆಸರಿನಲ್ಲಿ ಸಾಕಷ್ಟು ಸಂಘಟನೆಗಳು ಇದ್ದರೂ, ನೇಕಾರರಿಗೆ ನ್ಯಾಯ ಒದಗಿಸಿಕೊಡಲಾಗಿಲ್ಲ. ನೇಕಾರರ ಸಾಮಾಜಿಕ, ಆರ್ಥಿಕ ಹಿತವನ್ನು ಕಾಪಾಡುವ ಉದ್ದೇಶದಿಂದ ನೇಕಾರರ ರಕ್ಷಣಾ ವೇದಿಕೆಯನ್ನು ಹುಟ್ಟುಹಾಕಲಾಗಿದೆ ಎಂದರು.    ಈ ಸಂದರ್ಭದಲ್ಲಿ ಆರ್‌.ಆರ್‌. ಕಾಳೆ, ಪರಶುರಾಮ ಬಳ್ಳಾರಿ, ಪ್ರಭು ಸ್ವಾಮಿಜಿ, ರಮೇಶ ಗಡ್ಡಿ, ಆದೇಶ ಹುಲಗೂರು, ಕೆ.ಟಿ. ಏಳಗಿ, ನಾರಾಯಣ ಕಂಠಿಗೌಡ್ರ, ಶಂಕರ ಲಕ್ಕುಂಡಿ, ಹನಮಂತ ಪಲಮಾರಿ, ಕಿರಣ ಬಸುಪಟ್ಟದ, ವಿನೋದ ಮದ್ದಾನಿ ಮತ್ತಿತರರು ಇದ್ದರು.

loading...