ಬೆಳೆಗಳಿಗೆ ಹುಳು ಬಾಧೆ: ಕಂಗಾಲಾದ ರೈತರು

0
54
loading...

ಕನ್ನಡಮ್ಮ ಸುದ್ದಿ-ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕುಗಳಲ್ಲಿ ಭತ್ತದ ತೆನೆ ಕತ್ತರಿಸುವ ಹುಳು (ಸೈನಿಕ ಹುಳು)ವಿನ ಬಾಧೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹತೋಟಿ ಕ್ರಮಗಳನ್ನು ತುರ್ತಾಗಿ ಮತ್ತು ಸಾಮೂಹಿಕವಾಗಿ ಕೈಗೊಳ್ಳಲು ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕೀಟದ ವೈಜ್ಞಾನಿಕ ಹೆಸರು ಮೈತಿಮ್ನಾ ಸಪರೇಟಾಗಿದ್ದು, ಪತಂಗ ಜಾತಿಗೆ ಸೇರಿದ ಕೀಟವಾಗಿದೆ. ಈ ಹುಳು ಹಗಲು ವೇಳೆ ಗರಿಗಳ ಬುಡದಲ್ಲಿ ಮತ್ತು ಮಣ್ಣಿನಲ್ಲಿ ಅಡಗಿಕೊಂಡಿದ್ದು ರಾತ್ರಿ ವೇಳೆ ಬೆಳೆಗಳನ್ನು ತಿಂದು ನಾಶಪಡಿಸುತ್ತವೆ. ಪ್ರಸ್ತುತ ವಾತಾವರಣ ಈ ಹುಳುವಿನ ಚಟುವಟಿಕೆಗೆ ಹಿತಕರವಾಗಿದ್ದು, ಇವುಗಳ ಬಾಧೆ ಉಲ್ಪಣಿಸಿದೆ. ಹುಳುವಿನ ಬಾಧೆ ತೀವ್ರತರವಾಗಿದ್ದು, ಪ್ರತಿ ಬುಡದಲ್ಲೂ 8-10 ಹುಳುಗಳು ಕಂಡುಬರುತ್ತಿವೆ.
ಕೇವಲ 2-3 ದಿನಗಳಲ್ಲಿ ಇಡೀ ಗದ್ದೆಯನ್ನೇ ಹಾಳುಮಾಡುವ ಸಾಮರ್ಥ್ಯಹೊಂದಿದೆ. ಈ ಹುಳುವಿನ ದಂಡು ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ಲಗ್ಗೆ ಇಡುತ್ತದೆ. ಈ ಕೀಟ ಭತ್ತವಲ್ಲದೇ ಮೆಕ್ಕೆಜೋಳ ದಂತಹ ಇತರೆ ಬೆಳೆಗಳಿಗೂ ಹಾನಿ ಮಾಡುತ್ತದೆ. ಹಾಗಾಗಿ ರೈತರು ಈ ಕೀಟವನ್ನು ನಿರ್ವಹಣೆ ಮಾಡಲು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಸೈನಿಕ ಹುಳುವಿನ ನಿರ್ವಹಣೆಗೆ ರೈತರು ವಿಷ ಪಾಷಾಣ ತಯಾರಿಸಿ ಎರಚಬೇಕು. ಪ್ರತೀ ಎಕರೆಗೆ ಭತ್ತದ ಥೌಡು 20 ಕೆಜಿ, ಹುಳಿ ಬೆಲ್ಲ 2 ಕೆಜಿ, ಮೊನೊಕ್ರೋಟಫಾಸ್‌ 36 ಎಸ್‌.ಎಲ್‌. 250 ಮಿಲಿ. ಹಾಗೂ 4 ಲೀಟರ್‌ ನೀರನ್ನು ಮಿಶ್ರಣ ಮಾಡಿ ಎರಚಬೇಕು.
ಬೆಲ್ಲವನ್ನು ನೀರಿನಲ್ಲಿ ಕರಗಿಸಿ, ಮೊನೊಕ್ರೋಟೋಫಾಸ್‌ ಕೀಟನಾಶಕü ಮತ್ತು ಭತ್ತದ ಥೌಡನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣಮಾಡಿ ರಾತ್ರಿಯಿಡೀ ಮಿಶ್ರಣವನ್ನು ಕಳಿಯಲು ಬಿಡಬೇಕು. ಮರುದಿನ ಸಾಯಂಕಾಲ (5 ಗಂಟೆ) ವೇಳೆ ಕೈಗವಚ ಧರಿಸಿಕೊಂಡು ಬೆಳೆಗಳಿಗೆ ಈ ವಿಷ ಪಾಷಣವನ್ನು ಎರಚಬೇಕು. ಎರಚುವ ಸಮಯದಲ್ಲಿ ಗದ್ದೆಯಲ್ಲಿ ನೀರಿರದಂತೆ ಎಚ್ಚರ ವಹಿಸಬೇಕು ಹಾಗೂ ಸಾಕು ಪ್ರಾಣಿಗಳು ಈ ವಿಷ ಪಾಷಣದಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಕೆವಿಕೆ ಕೀಟಶಾಸ್ತ್ರ ವಿಭಾಗದ ರೂಪಾ ಪಾಟೀಲ್‌ ಸಲಹೆ ನೀಡಿದ್ದಾರೆ.

loading...