ಸೆಸ್ ಹಣವನ್ನು ದುರ್ಬಳಕೆ: ಬಿಸ್ವಾಸ್ ಅವರ ಭಾವಚಿತ್ರದ ಅಣುಕು ಶವಯಾತ್ರೆ

0
30
loading...


ವಿಜಯಪುರ : ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ಕಾರ್ಮಿಕ ಇಲಾಖೆ ಕಾರ್ಯದರ್ಶಿ
ಆದಿತ್ಯ ಬಿಸ್ವಾಸ್ ಅವರ ಕ್ರಮವನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ `ಬಿಸ್ವಾಸ್ ಹಟಾವೋ’ ರ್ಯಾಲಿ ನಡೆಸಿದರು.
ರ್ಯಾಲಿಯಲ್ಲಿ ಬಿಸ್ವಾಸ್ ಅವರ ಭಾವಚಿತ್ರವಿರಿಸಿ ಅಣುಕು ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಪ್ರಾರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಹಗಲಿರುಳೆನ್ನದೇ ಬೆವರು ಹರಿಸಿ ದುಡಿಯುವ ಶ್ರಮಿಕ ವರ್ಗದ ಹಿತರಕ್ಷಣೆಗಾಗಿ ಯೋಜನೆ ರೂಪಿಸುವುದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಸೆಸ್ ಹಣವನ್ನು ಖರ್ಚು ಮಾಡಲು ಯೋಜನೆ ರೂಪಿಸಿರುವುದು ಎಷ್ಟು ಸರಿ? ಇದು ಕಾರ್ಮಿಕರಿಗೆ ಮಾಡುವ ದೊಡ್ಡ ಅನ್ಯಾಯ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸ್ಮಾರ್ಟ್‍ಫೋನ್, ಏರ್ ಅಂಬ್ಯುಲೆನ್ಸ್ ಮೊದಲಾದ ಕಾರ್ಮಿಕರಿಗೆ ಕೈಗೆಟುಕದ ಹಾಗೂ ಉಪಯೋಗಕ್ಕೆ ಬಾರದ ಯೋಜನೆಗಳನ್ನು ಕಾರ್ಯಗತಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಟ್ಟಡ ಕಾರ್ಮಿಕರ ಹಿತರಕ್ಷಣೆಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುವುದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಬಿಸ್ವಾಸ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ 5600 ಕೋಟಿ ರೂ. ಅಧಿಕ ಸೆಸ್ ಹಣವನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಆದಿತ್ಯ ಬಿಸ್ವಾಸ್ ಅವರು ಮನಬಂದಂತೆ ಖರ್ಚು ಮಾಡಲು ಯೋಜನೆ ರೂಪಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಸೆಸ್ ಹಣದಿಂದ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸುಮಾರು 11 ಲಕ್ಷ ಫಲಾನುಭವಿಗಳಿಗೆ 400 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್‍ಫೋನ್ ನೀಡಲು ಉದ್ದೇಶಿಸಿದ್ದಾರೆ. ಇಷ್ಟೊಂದು ಬೃಹತ್ ಮೊತ್ತದ ಹಣವನ್ನು ಕೇವಲ ಸ್ಮಾರ್ಟ್‍ಫೋನ್ ಖರೀದಿಗೆ ವಿನಿಯೋಗಿಸುವುದು ಸರಿಯೇ, ಈ ಸ್ಮಾರ್ಟ್‍ಫೋನ್‍ನಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನ ಸಹ ಇಲ್ಲ ಎಂದರು.
ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಮಹಾದೇವಪ್ಪ ದೇವರ, ಪರಸನಗೌಡ ಫಾಟೀಲ, ಲಕ್ಷ್ಮಣ ದ್ಯಾವಾಪೂರ, ಅಕ್ರಂ ಮಾಶ್ಯಾಳಕರ, ಜಹಾಂಗೀರ ಮಿರ್ಜಿ, ನಾನಾಗೌಡ ಚಾಂದಕವಠೆ, ನಿರ್ಮಲಾ ಹೊಸಮನಿ ಮೊದಲಾದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

loading...