ಸ್ವಚ್ಛತಾ ಆಂದೋಲನ ಸಾರ್ಥಕ ಶ್ರಮದಾನ

0
30
loading...

ಹಳಿಯಾಳ: ಪುರಸಭೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷವೂ ಸಹ ಗಾಂಧಿ ಜನ್ಮದಿನಾಚರಣೆಯಿಂದ ಆರಂಭಗೊಂಡಿರುವ ಸ್ವಚ್ಛತಾ ಆಂದೋಲನವು ಉತ್ಸಾಹದಿಂದ ಮುಂದುವರೆದಿದೆ. ಸ್ವಚ್ಛತಾ ಆಂದೋಲನದ ಅಂಗವಾಗಿ ನಿತ್ಯ ಸೂರ್ಯೋದಯದ ಸಮಯದಲ್ಲಿ ಸಾರ್ಥಕ ಶ್ರಮದಾನ ನಡೆದಿದೆ.
ಈ ಆಂದೋಲನವನ್ನು ಪ್ರಾಯೋಗಿಕವಾಗಿ ಯಶಸ್ವಿಗೊಳಿಸಿ ತನ್ಮೂಲಕ ಜನಜಾಗೃತಿ, ಪರಿಸರ ಸ್ವಚ್ಛತೆ ಉಂಟು ಮಾಡಲು ಎರಡು ತಂಡಗಳನ್ನು ರಚಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಸರಕಾರಿ ಸಿಬ್ಬಂದಿಗಳೇ ಪಾಲ್ಗೊಂಡಿದ್ದು ಹಿರಿಯ ನಾಗರಿಕರ ವೇದಿಕೆಯವರು, ಜಯ ಕರ್ನಾಟಕ ಸಂಘಟನೆಯವರು ಸಹ ಸಾಥ್‌ ನೀಡುತ್ತಿದ್ದಾರೆ.
ಸ್ವಚ್ಛತಾ ಆಂದೋಲನವನ್ನು ಯಶಸ್ವಿಯಾಗಿಸಲು ತಹಶೀಲ್ದಾರ ವಿದ್ಯಾಧರ ಗುಳಗುಳಿ ವಿಶೇಷ ಆಸಕ್ತಿ ವಹಿಸಿದ್ದು ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಮುಖ್ಯಾಧಿಕಾರಿ ಕೇಶವ ಚೌಗುಲೆ ನೇತೃತ್ವದಲ್ಲಿ ಪುರಸಭೆಯ ಸಿಬ್ಬಂದಿಗಳು ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಾ ಮಟ್ಟದ ಹಲವು ಅಧಿಕಾರಿಗಳು ಸಹ ಕೈಜೋಡಿಸುತ್ತಿದ್ದಾರೆ.
ಪ್ರತಿ ಕಾರ್ಯಾಲಯದ ಆವರಣದ ಒಳಗಡೆ ಆಯಾ ಕಚೇರಿ ಸಿಬ್ಬಂದಿಗಳು ಸ್ವಚ್ಛತೆ ಮಾಡುತ್ತಿದ್ದು ಲೋಕೋಪಯೋಗಿ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಬರುವ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಹುಲ್ಲು ಹಾಗೂ ಗಿಡ-ಗಂಟಿಗಳನ್ನು ಕತ್ತರಿಸುತ್ತಿದ್ದಾರೆ.
ಶ್ರಮದಾನದ ಎರಡು ತಂಡಗಳ ಕಾರ್ಯನಿರ್ವಹಣೆಯ ಬಗ್ಗೆ ಗಮನಹರಿಸಲು ಪುರಸಭೆ ಹಾಗೂ ತಹಶೀಲ್ದಾರ ಕಚೇರಿಯಿಂದ ತಲಾ ಒಬ್ಬರು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಈ ಸ್ವಚ್ಛತಾ ಆಂದೋಲದಲ್ಲಿ ಪಾಲ್ಗೊಂಡವರ ಕ್ರಿಯಾಶೀಲತೆಯಿಂದಾಗಿ ಉದ್ದೇಶದ ಕಾರ್ಯವು ಅರ್ಥಪೂರ್ಣವಾಗಿ ಯಶಸ್ವಿಗೊಳ್ಳುತ್ತಾ ಸಾಗಿದೆ.

loading...