ಹಳಿಯಾಳ ಭಾಜಪ ಅಭ್ಯರ್ಥಿಗಳಾಗಲು ಐವರ ನಿರೀಕ್ಷೆ

0
26
loading...

**ನಾಗರಾಜ ಶಹಾಪುರಕರ**
ಹಳಿಯಾಳ: ವಿಧಾನಸಭಾ ಚುನಾವಣೆಗಿಂತ ಅರ್ಧ ವರ್ಷ ಮುಂಚೆಯೇ ತಲಾ ಐವರು ಅಭ್ಯರ್ಥಿಗಳ ಪಟ್ಟಿ ರವಾನಿಸುವಂತೆ ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಸಮಿತಿಯು ರಾಜ್ಯ ಸಮಿತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಹಳಿಯಾಳ ಭಾಗದಲ್ಲಿ ಅಭ್ಯರ್ಥಿಗಳಾಗಲು ತೀವ್ರ ಅಪೇಕ್ಷೆ ಪಟ್ಟಿಯಲ್ಲಿರುವವರಲ್ಲಿ ಹಾಗೂ ಅವರ ಬೆಂಬಲಿಗರಲ್ಲಿ ತಲ್ಲಣ ತಳಮಳಗಳು ಆರಂಭಗೊಂಡಿವೆ.
ಹಳಿಯಾಳದ ಭಾಜಪವು ಎರಡು ಬಣಗಳ ಸಂಘರ್ಷದ ಕಾಲಘಟ್ಟದಲ್ಲಿ ದಾಟುತ್ತಿದ್ದು, ಶತಾಯಗತಾಯ ಟಿಕೇಟ್‌ ಪಡೆಯಲು ಮಾಜಿ ಶಾಸಕ ಸುನೀಲ ಹೆಗಡೆ ಹರಸಾಹಸ ಪಡುತ್ತಿದ್ದಾರೆ. ಅವರ ಟಿಕೇಟ್‌ ತಪ್ಪಿಸಲು ಸಹ ನಿರಂತರ ಪ್ರಯತ್ನಗಳು ನಡೆಯುತ್ತಿವೆ.
ಚುನಾವಣೆಗಿಂತ ಆರು ತಿಂಗಳ ಮುಂಚೆಯೇ ಅಭ್ಯರ್ಥಿಗಳ ಘೋಷಣೆಯಾದರೆ ಚುನಾವಣೆಯ ಹೊಸ್ತಿಲಿನಲ್ಲಿ ಆಗಬೇಕಾದ ರಾಜಕೀಯ ಸಮೀಕರಣಗಳು ಇದೇ ಸಂದರ್ಭದಲ್ಲಿ ಆಗಿ ಪಕ್ಷದಲ್ಲಿ ಉಳಿಯುವವರು ಉಳಿದು ಇಲ್ಲಿಂದ ತೆರಳುವವರು ಈಗಲೇ ತೊಲಗಲಿ ಎಂದು ಭಾಜಪ ವರಿಷ್ಠರ ಅಭಿಲಾಷೆಯಾಗಿದೆ. ಅಭ್ಯರ್ಥಿಯಾಗಿ ಘೋಷಣೆಯಾದವರ ನೇತೃತ್ವದಲ್ಲಿ ಸತತ 6 ತಿಂಗಳ ಕಾಲ ಸಂಘಟಿಸಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರ ರೂಪಿಸಿ ಅದನ್ನು ಅನುಷ್ಠಾನಗೊಳಿಸುವ ಚಿಂತನೆ ಇದೆ ಎಂದು ತಿಳಿದುಬಂದಿದೆ.
ಹಳಿಯಾಳ ವಿಧಾನಸಭಾ ಕ್ಷೇತ್ರವು ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ, ಗ್ರಾಮಾಂತರ ಭಾಗದ ಹಳ್ಳಿಗಳು, ದಾಂಡೇಲಿ ನಗರ ಹಾಗೂ ಜೋಯಿಡಾ ತಾಲೂಕು ಒಳಗೊಂಡಿದ್ದರೂ ಸಹ ವಿಧಾನಸಭಾ ಕ್ಷೇತ್ರದಲ್ಲಿ ಹಳಿಯಾಳ ತಾಲೂಕು ಸಿಂಹಪಾಲು ಮತದಾರರ ಸಂಖ್ಯೆ ಹೊಂದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಾಗಲು ಇಲ್ಲಿನವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೂ ಸಹ ದಾಂಡೇಲಿ ಮತ್ತು ಜೋಯಿಡಾ ತಾಲೂಕಿನವರಿಗೂ ಸಹ ಟಿಕೇಟ್‌ ಅಪೇಕ್ಷಿತರ ಯಾದಿಯಲ್ಲಿ ಸೇರ್ಪಡೆ ಮಾಡಲೂಬಹುದು.
ಒಟ್ಟಾರೆ ಭಾಜಪದ ವಿಧಾನಸಭಾ ಚುನಾವಣೆಯ ಟಿಕೇಟ್‌ ಆಕಾಂಕ್ಷೆಯ ವಿದ್ಯಮಾನವು ಹಲವು ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡಲಿದ್ದು ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಾಗಿದೆ.

loading...