ಹಿಂಗಾರು ಮಳೆಗೆ 9 ಸಾವಿರ ಹೆಕ್ಟೇರ್ ಸೋಯಾಬಿನ್ ಬೆಳೆ ಹಾನಿ

0
25
loading...

ಕನ್ನಡಮ್ಮ ಸುದ್ದಿ

ಬೆಳಗಾವಿ: ಹಿಂಗಾರು ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 9448 ಹೆಕ್ಟೇರ್ ಸೋಯಾಬಿನ್ ಬೆಳೆ ಹಾನಿಯಾಗಿದೆ. ಅತೀ ಹೆಚ್ಚು ಪ್ರಮಾಣದಲ್ಲಿ ಬೆಳಗಾವಿ ತಾಲೂಕಿನಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಅವರು ಗುರುವಾರ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾ ಭವನದಲ್ಲಿ ಜರುಗಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 19 ರಷ್ಟು ಮುಂಗಾರು ಮಳೆ ಕಡಿಮೆಯಾಗಿದೆ. ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಸೋಯಾಬಿನ್ ಬೆಳೆಯೊಂದಿಗೆ ಇನ್ನಿತರ ಬೆಳೆಗಳು ಮಳೆಗೆ ಹಾನಿಯಾಗಿರುವುದಾಗಿ ತಿಳಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಹಿಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಮುಂಗಾರು ಬೆಳೆ ಹಾನಿ ವರದಿಯನ್ನು ಶೀಘ್ರವಾಗಿ ಸಿದ್ದಪಡಿಸಬೇಕು ಎಂದು ರಾಕೇಶ ಸಿಂಗ್ ತಿಳಿಸಿದರು.
ಬಾಣಂತಿ ಹಾಗೂ ಗರ್ಬಿಣಿ ಮಹಿಳೆಯರಿಗೆ ಪೌಷ್ಟಿಕಾಹಾರ ನೀಡುವ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯ ಜಾರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ರಾಕೇಶ ಸಿಂಗ್ ಸೂಚಿಸಿದರು.
ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಜಿಯಾವುಲ್ಲಾ. ಎಸ್. ಜಿಪಂ ಸಿಇಒ ರಾಮಚಂದ್ರನ್. ಆರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

loading...