ಅತಿಕ್ರಮಣ ತೆರವಿಗೆ ಒಂದು ವಾರದ ಗಡುವು ನೀಡಿದ ಬಿಜೆಪಿ

0
20
loading...

ದಾಂಡೇಲಿ:- ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಮತ್ತು ನಗರದ ಬಹುತೇಕ ಕಡೆಗಳಲ್ಲಿ ಅತಿಕ್ರಮಣಗಳು ಎಲ್ಲೆ ಮೀರಿ ನಡೆಯುತ್ತಿದ್ದು, ಅತಿಕ್ರಮಿತ ಜಾಗ ಹಾಗೂ ಅನಧಿಕೃತ ಗೂಡಂಗಡಿಗಳನ್ನು ಕೂಡಲೆ ತೆರವುಗೊಳಿಸುವಂತೆ ನಗರದ ಬಿಜೆಪಿ ಘಟಕದ ನಿಯೋಗವು ಬಿಜೆಪಿ ಅಧ್ಯಕ್ಷ ಬಸವರಾಜ ಕಲಶೆಟ್ಟಿಯವರ ನೇತೃತ್ವದಲ್ಲಿ ಗುರುವಾರ ನಗರ ಸಬೆಗೆ ಭೇಟಿ ನೀಡಿ ಪೌರಾಯುಕ್ತರಲ್ಲಿ ಮಾತುಕತೆ ನಡೆಸಿ, ಆಗ್ರಹಿಸಿ, ಅತಿಕ್ರಮಣ ತೆರವುಗೊಳಿಸಲು ಒಂದು ವಾರದ ಗಡುವು ನೀಡಿದೆ.
ಪೌರಾಯುಕ್ತ ಜತ್ತಣ್ಣನವರಿಗೆ ನಗರದಲ್ಲಿ ನಡೆಯುತ್ತಿರುವ ಅತಿಕ್ರಮಣ ಹಾಗೂ ಅನಧಿಕೃತ ಗೂಡಂಗಡಿಗಳ ಬಗ್ಗೆ ಬಸವರಾಜ ಕಲಶೆಟ್ಟಿ, ಪಕ್ಷದ ಮುಖಂಡರುಗಳಾದ ರವೀಂದ್ರ ಷಾ, ನರೇಂದ್ರ ಚೌವ್ಹಾಣ್‌, ನಗರ ಸಭಾ ಸದಸ್ಯ ರವಿ ಸುತಾರ್‌, ಚಂದ್ರಕಾಂತ ಕ್ಷೀರಸಾಗರ, ಭೀಮುಶಿ ಬಾದೋಳಿಯವರುಗಳು ವಿವರಿಸಿ, ಅತಿಕ್ರಮಣದ ಬಗ್ಗೆ ನಗರ ಸಭೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬಡವರ ಹೆಸರೇಳಿ ಉಳ್ಳವರು ಗೂಡಂಗಡಿಗಳನ್ನು ಹಾಕುತ್ತಿದ್ದು, ಅನಧಿಕೃತ ಗೂಡಂಗಡಿಗಳನ್ನು ಒಂದುವಾರದೊಳಗೆ ತೆರವುಗೊಳಿಸಬೇಕು.
ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಪೌರಾಯುಕ್ತರ ಮೇಲೆ ಸಂಶಯ ಬರುತ್ತದೆ ಎಂದು ಎಚ್ಚರಿಸಿದರು. ಅನಧಿಕೃತ ಗೂಡಂಗಡಿಗಳಿರುವ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ ನಗರ ಸಭೆಗೆ ಆದಾಯ ಬರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಜತ್ತಣ್ಣನವರು ಒಂದು ವಾರದೊಳಗೆ ಅತಿಕ್ರಮಣ ಹಾಗೂ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವುದಾಗಿ ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದರು. ಬಿಜೆಪಿ ನಿಯೋಗದಲ್ಲಿ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಕಾರ್ಯದರ್ಶಿ ನರೇಂದ್ರ ಚೌವ್ಹಾಣ್‌, ನಗರ ಸಭಾ ಸದಸ್ಯ ರವಿ ಸುತಾರ್‌, ಮುಖಂಡರುಗಳಾದ ರಫೀಕ ಹುದ್ದಾರ, ರವೀಂದ್ರ ಷಾ, ಚಂದ್ರಕಾಂತ ಕ್ಷೀರಸಾಗರ, ವಿಷ್ಣು ವಾಜ್ವೆ, ಗುರು ವ್ಮಠಪತಿ, ಎಂ.ಎಸ್‌.ನಾಯ್ಕ, ಮಂಜುನಥ ಯರಗೇರಿ, ಸಂಜಯ್‌ ಕಲ್ಯಾಣಿ, ಭೀಮುಶಿ ಬಾದೋಳಿ ಮೊದಲಾದವರು ಉಪಸ್ಥಿತರಿದ್ದರು.

loading...