ಕಬ್ಬಿಗೆ 3 ಸಾವಿರ ರೂ. ಮೊದಲ ಕಂತು ನಿಗದಿಪಡಿಸಲು ಠರಾವು

0
53
loading...

ಹಳಿಯಾಳ:- ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಅನ್ವಯವಾಗುವಂತೆ ಸ್ಥಳೀಯ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ ಕಬ್ಬಿಗೆ ಮೊದಲ ಕಂತು 3 ಸಾವಿರ ರೂ. ಗಳಂತೆ ನಿಗದಿಪಡಿಸುವಂತೆ ನ.1 ರಂದು ತಾಲೂಕಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಠರಾಯಿಸಲಾಗಿದೆ.
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಇವರ ಉಪಸ್ಥಿತಿಯಲ್ಲಿ ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು, ಸಕ್ಕರೆ ಕಾರ್ಖಾನೆಯ ಆಡಳಿತ ವಿಭಾಗದವರು, ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಾಡುವ ಸ್ಥಳೀಯ ಮಧ್ಯವರ್ತಿಗಳು ಪಾಲ್ಗೊಂಡಿದ್ದರು.
ಪ್ಯಾರಿ ಸಕ್ಕರೆ ಕಾರ್ಖಾನೆಯು ಕಬ್ಬು ನುರಿಸುವ ಕಾರ್ಯ ಆರಂಭಗೊಳಿಸಲು ಸಕಲ ಸಿದ್ಧತೆ ಪೂರ್ಣಗೊಳಿಸಿರುವ ಬಗ್ಗೆ ಕಾರ್ಖಾನೆಯ ಕಾರ್ಯಾನಿರ್ವಾಹಕ ವೆಂಕಟರಾವ್‌ ಸಭೆಗೆ ವಿವರಿಸಿದರು.
ದರ ನಿಗದಿಪಡಿಸದೇ ಕಬ್ಬು ನುರಿಸುವದರ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಈ ಬಗ್ಗೆ ಕಾರ್ಖಾನೆಯ ನಿಲುವು ಸ್ಪಷ್ಟ ಪಡಿಸಬೇಕು ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾಹಕರು ಪ್ರತಿ ಟನ್‌ ಕಬ್ಬಿಗೆ 2500 ರೂ. ಮೊದಲ ಕಂತು ಎಂದು ನಿರ್ಣಯಿಸಿ ಮುಂದೆ ಸಕ್ಕರೆ ದರ, ಸರ್ಕಾರದ ನಿರ್ಣಯ ಹಾಗೂ ತಮ್ಮ ಸಕ್ಕರೆ ಕಾರ್ಖಾನೆಗಳ ಸಂಘ ಕೈಗೊಂಡ ನಿರ್ಣಯ ಇವುಗಳನ್ನು ಕ್ರೂಢೀಕರಿಸಿ ಮುಂದಿನ ಕಂತಿನ ಬಗ್ಗೆ ನಿರ್ಣಯಿಸಲಾಗುವುದು ಎಂದು ತಿಳಿಸಿದರು. ಮೊದಲ ಕಂತು 2500 ರೂ. ದರದ ಬಗ್ಗೆ ರೈತ ಮುಖಂಡರು ತೀವೃ ಆಕ್ಷೇಪ ವ್ಯಕ್ತಪಡಿಸಿದರು.
ರೈತ ಧುರೀಣ ಬಾಬುನಿಂಗಪ್ಪಾ ವಾಲೇಕರ ಮಾತನಾಡುತ್ತಾ ಸಂಕೇಶ್ವರದ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ತಾವೇ ಭರಿಸಿ ಹೆಚ್ಚುವರಿ ಲಗಾಣಿ ವೆಚ್ಚ ಇಲ್ಲದೇ ಮೊದಲ ಕಂತು 3 ಸಾವಿರ ರೂ. ನಿಗದಿಪಡಿಸಿ ಕಬ್ಬು ಸಾಗಾಣಿಕೆ ಮಾಡುತ್ತಿದ್ದಾರೆ. ಶಿರಗುಪ್ಪಿ ಕಾರ್ಖಾನೆಯವರು 3030 ರೂ. ದರ ನೀಡಲು ನಿರ್ಣಯಿಸಿರುವ ಬಗ್ಗೆ ತಿಳಿದು ಬಂದಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಕ್ಕರೆ ಕಾರ್ಖಾನೆಯವರು 2500 ರೂ. ಎಂದು ಹೇಳುವುದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ ಎಂದು ಹೇಳಿ ಸಂಕೇಶ್ವರ ಸಕ್ಕರೆ ಕಾರ್ಖಾನೆ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಯವರು ಮೊದಲ ಕಂತು 3 ಸಾವಿರ ರೂ. ಗಳಂತೆ ನೀಡುವ ಬಗ್ಗೆ ಘೋಷಿಸುವಂತೆ ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ಎಂ.ವಿ. ಘಾಡಿ, ಶಂಕರ ಕಾಜಗಾರ, ಅಶೋಕ ಮೇಟಿ, ಯು.ಕೆ. ಬೋಬಾಟಿ, ಗಿರೀಶ ಟೋಸೂರ, ರೈತ ಮುಖಂಡರಾದ ಬಿ.ಡಿ. ಚೌಗುಲೆ, ಶಿವಪುತ್ರ ನುಚ್ಚಂಬ್ಲಿ, ಮಾರುತಿ ಪೆಟ್ನೇಕರ, ತುಕಾರಾಮ ಕೆ. ಗೌಡಾ, ಅನಿಲ ಚವ್ಹಾಣ, ಅಷ್ಪಾಕ್‌ ಪುಂಗಿ, ಬೆಡದೋಳಕರ, ಕಾರ್ಖಾನೆಯ ಮುಖ್ಯಸ್ಥರಾದ ಕಬ್ಬು ವಿಭಾಗದ ಎನ್‌.ಎಸ್‌. ಹಿರೇಮಠ, ಕಟಾವು ಹಾಗೂ ಸಾಗಾಣಿಕೆ ವಿಭಾಗದ ಹನ್ಮಂತ ಯಲ್ಲಡಗಿ, ವಲಯ ವ್ಯವಸ್ಥಾಪಕ ರವಿರಾಜ ಭಟ್‌ ಮೊದಲಾದವರು ಪಾಲ್ಗೊಂಡಿದ್ದರು.

loading...