ಕೆರೆ ಅಭಿವೃದ್ಧಿಗೆ ಅಗತ್ಯ ಕ್ರಮ: ಸಚಿವ ಡಾ. ಎಂ.ಬಿ. ಪಾಟೀಲ

0
28
loading...

ವಿಜಯಪುರ :ನಗರದ ಹೊರವಲಯದಲ್ಲಿರುವ ಆದಿಲ್‌ಶಾಹಿ ಅರಸರು ಕಟ್ಟಿದ ಐತಿಹಾಸಿಕ ಕುಮಟಗಿ ಬೇಸಿಗೆ ಅರಮನೆ ಕೆರೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಾ. ಎಂ.ಬಿ. ಪಾಟೀಲ ತಿಳಿಸಿದರು.
ಐತಿಹಾಸಿಕ ಕುಮಟಗಿ ಕೆರೆ, ಬೇಸಿಗೆ ಅರಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಐತಿಹಾಸಿಕ ಮಮದಾಪುರ, ಬೇಗಂ ತಾಲಾಬ ಕೆರೆಯ ಮಾದರಿಯಲ್ಲಿ ಆದಿಲ್‌ಶಾಹಿ ಅರಸರು ಬೇಸಿಗೆಯಲ್ಲಿ ತಂಗುತ್ತಿದ್ದ ಕುಮಟಗಿ ಕೆರೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ಪ್ರಮುಖ ಪ್ರವಾಸಿ ಸ್ಥಾನವಾಗಿ ಆಕರ್ಷಣೆಗೊಳಿಸುವ ನಿಟ್ಟಿನಲ್ಲಿ ಸಚಿವರು ಈ ಕೆರೆಯ ಹೂಳು ಎತ್ತುವುದು, ಕೆರೆಯ ಸುತ್ತಲೂ ಪಿಚ್ಚಿಂಗ್‌ ನಿರ್ಮಿಸುವುದು, ಸಿಂದಗಿ ಮುಖ್ಯರಸ್ತೆಯಿಂದ ಕೆರೆಯವರೆಗೆ ರಸ್ತೆ ನಿರ್ಮಾಣಗೊಳಿಸುವುದು, ಕೆರೆಯ ಏರಿಯ ರಸ್ತೆಯನ್ನು ಸುಂದರವಾಗಿ ಅಭಿವೃದ್ಧಿಪಡಿಸುವುದು, ಕೆರೆಯಲ್ಲಿ ಹಾಗೂ ಸುತ್ತಲೂ ಇರುವ ಕಸ-ಕಂಟಿಗಳನ್ನು ಜಂಗಲ್‌ ಕಟಿಂಗ್‌ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸ್ಥಳದಲ್ಲಿದ್ದ ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆ ಅರಮನೆಯ ಐತಿಹಾಸಿಕ ಪೇಂಟಿಂಗ್‌ಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ರಕ್ಷಿಸಿ ಅರಮನೆಯನ್ನು ಸುಂದರ, ಸುಸಜ್ಜಿತಗೊಳಿಸಲು ಪ್ರಾಚ್ಯವಸ್ತು ಇಲಾಖೆ ಎಎಸ್‌ಐಗೆ ವರದಿ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದರು.
ಆದಿಲ್‌ಶಾಹಿ ಅರಸರ ಅಮೂಲ್ಯ ವಾಸ್ತುಶಿಲ್ಪಕಲೆಗೆ ಸಾಕ್ಷಿಯಾಗಿದ್ದ ಸಿಂದಗಿ ರಸ್ತೆಯಲ್ಲಿರುವ ಕುಮಟಗಿಯ ಬೇಸಿಗೆ ಅರಮನೆ ಕೆರೆ ಅನಾದರಕ್ಕೆ ಒಳಗಾಗಿ ತನ್ನ ವೈಭವ ಕಳೆದುಕೊಂಡಿತ್ತು. ನೀರಿಲ್ಲದೆ ಭಣಗುಡುತ್ತಿದ್ದ ಈ ಕೆರೆಯ ಸುತ್ತಲಿನ ಅನೇಕ ಸ್ಮಾರಕಗಳನ್ನು ದಾರಿಹೋಕರು, ದನಗಾಹಿಗಳು ವಿರೂಪಗೊಳಿಸಿದ್ದು, ಸಚಿವರ ವೈಯಕ್ತಿಕ ಆಸಕ್ತಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಈ ಕೆರೆಯನ್ನು ತಮ್ಮ ಜಲಸಂಪನ್ಮೂಲ ಇಲಾಖೆಯಿಂದಲೇ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ, ಅಲ್ಲದೇ ಈ ಕೆರೆಯನ್ನು ಮುಳವಾಡ ಏತ ನೀರಾವರಿ ಯೋಜನೆ, ವಿಜಯಪುರ ಮುಖ್ಯ ಕಾಲುವೆಯಿಂದ ತುಂಬಿಸಲು ಸಹ ಯೋಜನೆ ರೂಪಿಸಲಾಗಿದೆ.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಕೆಬಿಜೆಎನ್‌ಎಲ್‌ ಆಲಮಟ್ಟಿ ವೃತ್ತ ಮುಖ್ಯ ಅಭಿಯಂತರ ಜಗನ್ನಾಥರೆಡ್ಡಿ, ಕಾರ್ಯ ನಿರ್ವಾಹಕ ಅಭಿಯಂತರರಾದ ಶಶಿಕಾಂತ ಹೊನವಾಡಕರ, ಎಂ.ಎಸ್‌. ಇನಾಂದಾರ, ವಿಶ್ವನಾಥ ಬಿರಾದಾರ, ಪುರಾತತ್ವ ಇಲಾಖೆಯ ರಾಕೇಶ ಉಪಸ್ಥಿತರಿದ್ದರು.

loading...