ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕ ಬಳಕೆ ಮಾಡಿಕೊಂಡಿಲ್ಲ: ಸಚಿವ ಅನಂತಕುಮಾರ

0
22
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಕೇಂದ್ರ ಸರ್ಕಾರ ಬೆಳೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ 4500 ಕೋಟಿ ರೂ.ಅನುದಾನ ನೀಡಿದರೂ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಆರೋಪಿಸಿದರು.
ಪಟ್ಟಣದ ಎಂಸ್ಸೆಸ್ಸೆಆರ್ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ನಡೆದ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆ ಸಮಾರಂಭದ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಕಳೆದ ಯುಪಿಎ ಸರ್ಕಾರದ ಹತ್ತು ವರ್ಷದ ಅವಧಿಯಲ್ಲಿ ಬೆಳೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ 4,500 ಸಾವಿರ ಕೋಟಿ ರೂ.ನೀಡಿದೆ. ಆದರೆ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರೇ ವರ್ಷಗಳಲ್ಲಿ 4,500 ಸಾವಿರ ಕೋಟಿ ರೂ.ಹಣ ನೀಡಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ಹಣ ನೀಡಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎಂಬ ಗಾದೆ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿಲ. ಅನ್ನಭಾಗ್ಯ ಯೋಜನೆ ಅನುದಾನದಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಬಹುಪಾಲಾಗಿದೆ. ಆದರೆ ರಾಜ್ಯ ಸರ್ಕಾರ ಕೇವಲ 3 ರೂ.ನೀಡಿ ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವದು ನಾಚಿಗೇಡಿನ ಸಂಗತಿಯಾಗಿದೆ ಎಂದರು. ಕಳೆದ ಏಳು ದಶಕಗಳಲ್ಲಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಲಾಲಬಹುದ್ದೂರ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಸಾಕಷ್ಟಿದೆ. ರಾಜ್ಯದಲ್ಲಿ ಹಾಡು ಹಗಲೆ ಹಿಂದೂ ಸಮುದಾಯದ ಯುವಕರ ಮೇಲೆ ಹಲ್ಲೆ, ಕೊಲೆ ನಡೆಯುತ್ತಿದ್ದರೂ ರಾಜ್ಯದ ಮೊಂಡ ಸರ್ಕಾರ ಯಾವುದೇ ಕ್ರಮ ಕೈಕೊಳ್ಳದೆ ಜಂಬ ಕೊಚ್ಚಿಕೊಳ್ಳುತ್ತಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಹುಡುಕಿದರು ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಿಮಾಚಲ ಪ್ರದೇಶ, ಗುಜರಾತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಭವಿಷ್ಯ ನುಡಿದರು. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜೊತೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಮನಮೋಹನಸಿಂಗ್ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆದರೆ ಈಗಿನ ಮೋದಿ ಅವರ ಆಡಳಿತ ವೈಖಯಿಂದ ಇಡೀ ವಿಶ್ವವೇ ಭಾರತದತ್ತ ಮುಖ ಮಾಡಿವೆ. ರಾಷ್ಟ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಗಾಳಿ ಬಿಸುತ್ತಿದ್ದು, ಜನತೆ ಮುಂಬರುವ ದಿನಗಳಲ್ಲಿ ಸಹಕಾರ ನೀಡಿ ಪಕ್ಷದ ಅಭ್ಯರ್ಥಿಗಳನ್ನು 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಅತಿಥಿ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪ್ರಲ್ಹಾದ ಜ್ಯೋಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ ಮಾತನಾಡಿದರು.
ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಸಕರಾದ ಉಮೇಶ ಕತ್ತಿ, ದುರ್ಯೋದನ ಐಹೊಳೆ, ಪಿ.ರಾಜು, ಮಹಾಂತೇಶ ಕವಟಗಿಮಠ, ಹಣುಮಂತ ನಿರಾಣಿ, ಮುಖಂಡರಾದ ಈರಣಾ ಕಡಾಡಿ, ಮಹಾಂತೇಶ ದೊಡಗೌಡರ, ಸಿ.ಆರ್.ಪಾಟೀಲ, ಶಶಿಕಾಂತ ನಾಯಕ, ಮಡಿವಾಳಪ್ಪ ಹೋಟಿ, ಸಿ.ಕೆ.ಮೆಕ್ಕೇದ, ಬಸನಗೌಡ ಪಾಟೀಲ, ಭಾರತಿ ಮಗದೂವi, ಸುನಂದಾ ಪಾಟೀಲ, ಮಂಜುಳಾ ದೇವರೆಡ್ಡಿ ಹಾಗೂ ಅನೇಕರು.

loading...