ಕೊಪ್ಪಳ ಜಿಲ್ಲೆಯ 1.63 ಲಕ್ಷ ಫಲಾನುಭವಿಗಳಿಗೆ ಮಾರ್ಚ್ ಒಳಗಾಗಿ ಉಚಿತ ಅನಿಲ ಸಂಪರ್ಕ

0
22
loading...

ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ
ಕೊಪ್ಪಳ : ಜಿಲ್ಲೆಯಲ್ಲಿನ ಬಿಪಿಎಲ್/ಅಂತ್ಯೋದಯ ಅನಿಲ ರಹಿತ ಪಡಿತರ ಚೀಟಿ ಹೊಂದಿರುವ 1.63 ಲಕ್ಷ ಕುಟುಂಬಗಳಿಗೆ 2018 ರ ಮಾರ್ಚ್ ಒಳಗಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಎಲ್ಪಿಜಿ ಅನಿಲ ಸಿಲಿಂಡರ್ ಸಂಪರ್ಕ ಒದಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ಜೊತೆಗೆ ಎರಡು ಗ್ಯಾಸ್ ಬರ್ನರ್ ಸ್ಟೌವ್ ಮತ್ತು ಎರಡು ಭರ್ತಿ ಮಾಡಿದ ಸಿಲಿಂಡರ್‍ಅನ್ನು ಸಂಪೂರ್ಣ ಉಚಿತವಾಗಿ ನೀಡಲಿದೆ.  ಇದಕ್ಕಾಗಿ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರ 4040 ರೂ. ಗಳನ್ನು ಭರಿಸಲಿದೆ.  ಸಿಲಿಂಡರ್ ಭದ್ರತಾ ಠೇವಣಿಗೆ 1450 ರೂ., ರೆಗ್ಯುಲೇಟರ್ ಠೇವಣಿ-150, ಸುರಕ್ಷಾ ಹೋಸ್-190 , ಡಿಜಿಸಿ ಪುಸ್ತಕ-50, ತಪಾಸಣೆ ಮತ್ತು ಜೋಡಣೆ ವೆಚ್ಚ-100, ಗ್ಯಾಸ್ ಸ್ಟೌವ್- 1000 ಹಾಗೂ ಎರಡು ಭರ್ತಿ ಸಿಲಿಂಡರ್- ರೂ. 1100 ಸೇರಿದಂತೆ ಒಟ್ಟು 4040 ರೂ. ವೆಚ್ಚ ಮಾಡಲಿದೆ.  ಯಾವುದೇ ಅನಿಲ ಸಂಪರ್ಕವನ್ನು ಹೊಂದದೇ ಇರುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಬಿಪಿಎಲ್ ಆದ್ಯತಾ ಕುಟುಂಬಗಳು ಅಥವಾ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರು ಈ ಯೋಜನೆಗೆ ಅರ್ಹರು.  1.63  ಲಕ್ಷ ಫಲಾನುಭವಿಗಳ ಪೈಕಿ, ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಇದೇ ನವೆಂಬರ್-ಡಿಸೆಂಬರ್ ತಿಂಗಳ ಒಳಗಾಗಿ 52059  ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು, ಫಲಾನುಭವಿಗಳನ್ನು ಆಯಾ ಶಾಸಕರುಗಳು ಇದೇ ನ. 18 ರ ಒಳಗಾಗಿ ಆಯ್ಕೆ ಮಾಡಲೇಬೇಕಿದೆ.  ಅದಕ್ಕೆ ಅಧಿಕಾರಿಗಳು ಕೂಡಲೆ ಸಿದ್ಧತೆ ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೂಚನೆ ನೀಡಿದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಮಾತನಾಡಿ, ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿದಾರರಿದ್ದು ಪಡಿತರ ಸೀಮೆ ಎಣ್ಣೆ ಪಡೆಯುತ್ತಿರುವ ಅನಿಲ ರಹಿತ ಕುಟುಂಬಗಳಿಗೆ ಸಂಪೂರ್ಣ ಉಚಿತ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ.  ಯಲಬುರ್ಗಾ ತಾಲೂಕಿನಲ್ಲಿ 37 ಸಾವಿರ, ಕುಷ್ಟಗಿ- 37 ಸಾವಿರ, ಕೊಪ್ಪಳ-44 ಸಾವಿರ ಹಾಗೂ ಗಂಗಾವತಿ ತಾಲೂಕಿನಲ್ಲಿ 45 ಸಾವಿರ ಸೇರಿದಂತೆ 1.63 ಲಕ್ಷ ಕುಟುಂಬಗಳು ಅರ್ಹವಾಗಿವೆ.  ಮೊದಲ ಹಂತದಲ್ಲಿ ನವೆಂಬರ್-ಡಿಸೆಂಬರ್ ಒಳಗಾಗಿ ಯಲಬುರ್ಗಾ-11956, ಕುಷ್ಟಗಿ- 11967, ಕೊಪ್ಪಳ- 14137 ಹಾಗೂ ಗಂಗಾವತಿ ತಾಲೂಕಿನ 139999 ಸೇರಿದಂತೆ 52059 ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲಾಗುವುದು.    ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ,  ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ಜಿಲ್ಲೆಯಲ್ಲಿನ ವಿವಿಧ ಅನಿಲ ಕಂಪನಿಗಳ ಅಡುಗೆ ಅನಿಲ ವಿತರಕರು ಪಾಲ್ಗೊಂಡಿದ್ದರು.

loading...