ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ವೀಣಾ

0
37
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಲಾಭದಾಯಕವಾದ ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ಜಿಲ್ಲಾ ಪಂಚಾಯತಿಯ ಅಧ್ಯಕ್ಷ ವೀಣಾ ಕಾಶಪ್ಪನವರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೇಷ್ಮೆ ಉತ್ಪಾದನೆಗೆ ಬೇಕಾಗುವ ಎಲ್ಲ ರೀತಿಯ ಅನುಕೂಲತೆಗಳು ಜಿಲ್ಲೆಯಲ್ಲಿ ಲಭ್ಯವಿರುವದರಿಂದ ರೇಷ್ಮೆ ಉತ್ಪಾನೆಯನ್ನು ಹೆಚ್ಚಿಸಲು ರೈತರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಕೋಲಾರ ಜಿಲ್ಲೆಯಲ್ಲಿ ಕಡಿಮೆ ನೀರಲ್ಲೆ ಹೆಚ್ಚು ಉತ್ಪಾಧಿಸುತ್ತಿದ್ದಾರೆ. ಆದರೆ ಎಲ್ಲ ಅನುಕೂಲತೆಗಳಿದ್ದರೂ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಯಾವ ಪ್ರದೇಶದಲ್ಲಿ ನೀರು ಕಡಿಮೆ ಇದೆಯೋ ಅಲ್ಲಿಯೂ ಸಹಿತ ರೆಷ್ಮೆ ಬೆಳೆಯನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ 365 ಎಕರೆ ಪ್ರದೇಶದಲ್ಲಿ ಈಗಾಗಲೇ ರೇಷ್ಮೆ ಬೆಳೆಯುತ್ತಿದ್ದು, ಈ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ 204 ರೈತರು ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಬೆಳೆಯಲು ಪ್ರೋತ್ಸಾಹಿಸಲು ತಿಳಿಸಿದರು.
ಕೃಷಿ ಭಾಗ್ಯ ಯೋಜನೆಯಡಿ ಪ್ರಗತಿ ಪರಿಶೀಲನೆ ನಡೆಸಿದ ವೀಣಾ ಕಾಶಪ್ಪನವರ ಸಮರ್ಪಕವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ಸಭೆಗೆ ಬರುವಾಗ ಯಾವುದೇ ಮಾಹಿತಿ ಕೇಳಿದರು ಸಮರ್ಪಕವಾಗಿ ಉತ್ತರ ನೀಡಲು ತಯಾರಾಗಿ ಬರಬೇಕು. ಕೇವಲ ಅಂಕಿ ಅಂಶಗಳ ಮಾಹಿತಿ ನೀಡದೇ ಯೋಜನೆಯ ಸಂಪೂರ್ಣ ಮಾಹಿತಿ ನೀಡಬೇಕೆಂದರು. ಕೃಷಿ ಇಲಾಖೆಯ ಅಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ವಿವಿಧ ಬೆಳೆಗಳ ಮಾರುಕಟ್ಟೆಯ ವೈಜ್ಞಾನಿಕ ಬೆಲೆಯ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ ಜಿ.ಪಂ ಸಿಇಓ ಕಡಿಮೆ ಬೆಲೆ ಇರುವ ಬೆಳೆಗಳ ಬಗ್ಗೆ ಮಾಹಿತಿ ನೀಡಲು ತಿಳಿಸಿದರು. ಸಾಮಾಜಿಕ ಅರಣ್ಯ ಇಲಾಖೆ ಕುರಿತು ಚರ್ಚಿಸಿದ ಅವರು ಜಿಲ್ಲೆಯಲ್ಲಿ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟಬಗ್ಗೆ ತಾಲೂಕುವಾರು ಮಾಹಿತಿ ನೀಡಲು ಸೂಚಿಸಿದರು. ಸಸಿಗಳ ವಿತರಣೆ, ನಾಟಿ ಕಾರ್ಯಕ್ರಮ ಹಾಗೂ ಹೊಸ ಪ್ರದೇಶ ಅಭಿವೃದ್ದಿಗಳಲ್ಲಿ 3.82 ವಾರ್ಷಿಕ ಗುರಿಗೆ 2.80 ಸಂಚಿತ ಸಾಧನೆ ಮಾಡಲಾಗಿದೆ ಎಂದು ಸಭೆ ತಿಳಿಸಲಾಯಿತು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಜಿ.ಪಂ ಅಧ್ಯಕ್ಷರು ಸಮಸ್ಯೆಗಳಲ್ಲಿ ತುರ್ತಾಗಿ ಟ್ಯಾಂಕರ ಮೂಲಕ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಮುಂದೆಯು ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು. ಬದಾಮಿ ತಾಲೂಕಿನಲ್ಲಿ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿತ್ತು. ಬೋರ್‍ವೆಲ್ ಕೊರೆಯಲಾಗಿದ್ದು, ಸದ್ಯ ಸಮಸ್ಯೆ ಇಲ್ಲವೆಂದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೈಗೊಳ್ಳಲಾದ ಒಟ್ಟು 7 ಕಾಮಗಾರಿಗಳಲ್ಲಿ ಒಂದು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವುಗಳು ಪ್ರಗತಿಯಲ್ಲಿವೆ. ಇಲಾಳ ಮತ್ತು ಸೈದಾಪೂರದಲ್ಲಿ ಹಮ್ಮಿಕೊಳ್ಳಲಾದ ಕಾಮಗಾರಿ ಕುಂಟಿತವಾಗಿದ್ದು, ಏಜೆನ್ಸಿ ಬದಲಾವಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಗುರಿ 27.11 ಲಕ್ಷ ಇದ್ದು, ಈ ಪೈಕಿ 99.2 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ 384 ಸ್ವ-ಸಹಾಯ ಗುಂಪುಗಳಿದ್ದು, ನಿಗದಿಪಡಿಸಿದ ಗುಂಪುಗಳಿಗೆ 15 ಸಾವಿರ ಸಂಚಿತ ನಿದಿ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಯಿತು. ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಸುರಳಕರ, ಜಿ.ಪಂ ನಿಂಗಪ್ಪ ಗೋಠೆ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಯೋಜನಾ ನಿರ್ದೇಶಕ ಎಸ್.ಎಸ್.ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...