ನ್ಯಾಯಾಂಗ ಹಾಗೂ ಪ್ರಜಾವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಎಲ್ಲರ ಕರ್ತವ್ಯ:ನ್ಯಾರತ್ನಕಲಾ

0
22
loading...

ಹಾವೇರಿ: ನ.25: ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರೀಕನ ಹೊಣೆಗಾರಿಕೆ ಎಂದು ಹಾವೇರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ರತ್ನಕಲಾ ಅವರು ಹೇಳಿದರು.
ಶನಿವಾರ ಹಾವೇರಿ ನಗರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಹಾಗೂ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಕೇವಲ ವಕೀಲರು ಹಾಗೂ ನ್ಯಾಯಾಧೀಶರದು ಮಾತ್ರ ಎಂದು ನಾವು ಭಾವಿಸಬಾರದು. ಉತ್ತಮ ಸಮಾಜ ಕಟ್ಟಲು ವಕೀಲರು, ಮಾಧ್ಯಮಗಳು ಸೇರಿದಂತೆ ನಾಗರೀಕರ ಸಾಮೂಹಿಕ ಹೊಣೆಗಾರಿಕೆ ಹಾಗೂ ಜವಾಬ್ದಾರಿಯ ಪಾಲು ಇದೆ ಎಂದು ಹೇಳಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ನ್ಯಾಯಾಂಗ, ಮಾಧ್ಯಮ ಒಳಗೊಂಡಂತೆ ಎಲ್ಲರ ಕೊಡುಗೆ ಅಪಾರವಾಗಿದೆ. ನಮ್ಮ ಮೇಲೆ ಸಮಾಜ ಅವಲಂಬಿತವಾಗಿದೆ, ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ತ್ಯಾಗ ಮನೋಭಾವ, ಸಾಮಾಜಿಕ ಹೊಣೆಗಾರಿಕೆಯಿಂದ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಮತ್ತಷ್ಟು ನಮ್ಮ ಜವಾಬ್ದಾರಿಗಳು ಹೆಚ್ಚಾಗಬೇಕು ಎಂದು ಹೇಳಿದರು.
ಇತ್ತೀಚಿನ ಸಮಾಜದಲ್ಲಿ ಮನುಷ್ಯನ ಬುದ್ಧಿವಂತಿಕೆಯ ಬೆಳವಣಿಗೆ ಹೆಚ್ಚಾಗಿದೆ. ಆದರೆ ಹೊಣೆಗಾರಿಕೆಗಳು ಕಡಿಮೆಯಾಗುತ್ತಿವೆ. ಸೇವಾ ವಲಯಗಳು ಉದ್ಯಮವಾಗಿ ಪರಿವರ್ತನೆಗೊಳ್ಳುವ ಸಂಕೀರ್ಣವಾದ ವ್ಯವಸ್ಥೆಯಕಡೆ ನಾವು ನಡೆಯುತ್ತಿದ್ದೇವೆ. ನಮ್ಮ ಮೇಲೆ ನಿರೀಕ್ಷೆಗಳನ್ನು ಇಟ್ಟಿಕೊಂಡಿರುವ ಸಮಾಜ ನಮ್ಮನ್ನು ದೇವರೆಂದು ಭಾವಿಸುತ್ತದೆ. ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಅಂತರಾಳದಲ್ಲಿ ಒಬ್ಬ ದೇವರಿರುತ್ತಾನೆ ಎಂದು ಹೇಳಲಾಗುತ್ತದೆ. ಸಂಕೀರ್ಣವಾದ ಈ ಸಂದರ್ಭದಲ್ಲಿ ನಮ್ಮೊಳಗಿನ ಒಳ್ಳೆಯತನ ಮಾನವೀಯತೆ ಎಂಬ ದೇವರನ್ನು ಸಮಾಜದ ಒಳಿತಿಗಾಗಿ ತ್ಯಾಗಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಈಶಪ್ಪ ಭೂತೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ನ್ಯಾಯಾಧೀಶರಾದ ಶ್ರೀಮತಿ ವೈ.ಎಲ್.ಲಾಡಖಾನ್ ಸೇರಿದಂತೆ ವಿವಿಧ ನ್ಯಾಯಾಧೀಶರು ಹಾಗೂ ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

loading...