ನ. 18 ರಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆ- ಡಾ. ರುದ್ರೇಶ್ ಘಾಳಿ

0
41
loading...

ಕೊಪ್ಪಳ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಪದವೀಧರ ಸಹ ಶಿಕ್ಷಕರ ನೇಮಕಾತಿಗಾಗಿ ನ. 18 ಮತ್ತು ನ. 25 ರಂದು ಎರಡು ಹಂತಗಳಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಿದ್ದು, ಪರೀಕ್ಷೆ ಸುಗಮ ಹಾಗೂ ಕ್ರಮ ಬದ್ಧವಾಗಿ ಜರುಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಟ್ಟು 656 ಹುದ್ದೆಗಳ ನೇಮಕಾತಿಗಾಗಿ ನ. 18, 19 ಮತ್ತು 25, 26 ರಂದು ಎರಡು ಹಂತಗಳಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಒಟ್ಟು 656 ಹುದ್ದೆಗಳ ಪೈಕಿ ಶೇ. 80 ರಷ್ಟು ಹೈದ್ರಾಬಾದ್-ಕರ್ನಾಟಕ ಪ್ರದೇಶ ವೃಂದದ 523 ಹುದ್ದೆಗಳು ಹಾಗೂ ಉಳಿದ ಮೂಲ ವೃಂದದ ಶೇ. 20 ರಷ್ಟು ಅಂದರೆ 133 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹೈ-ಕ ವೃಂದದ 523 ಹುದ್ದೆಗಳಿಗೆ 1362 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಉಳಿದ ಮೂಲ ವೃಂದದ 133 ಹುದ್ದೆಗಳಿಗೆ 2953 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಸಮಾಜ ಪಾಠಗಳು ವಿಷಯಕ್ಕೆ- 96 ಹುದ್ದೆಗಳು, ಗಣಿತ ಮತ್ತು ವಿಜ್ಞಾನ- 282 ಹುದ್ದೆಗಳು ಹಾಗೂ ಭಾಷಾ ಆಂಗ್ಷ ವಿಷಯಕ್ಕೆ 278 ಹುದ್ದೆಗಳು ಇವೆ. ಪರೀಕ್ಷೆಯನ್ನು ಸುಗಮವಾಗಿ ಹಾಗೂ ಕ್ರಮಬದ್ಧವಾಗಿ ಕೈಗೊಳ್ಳಲು ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಪ್ರಶ್ನೆ ಪತ್ರಿಕೆ ಸ್ವೀಕೃತಿ ಹಾಗೂ ವಿತರಣೆ ವಿಷಯದಲ್ಲಿ ತೀವ್ರ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಪರೀಕ್ಷೆ ಪ್ರಾರಂಭಕ್ಕೂ ಮುನ್ನ ನಿಗದಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳು ತಲುಪುವಂತಾಗಬೇಕು. ಇದಕ್ಕೆ ಮಾರ್ಗಾಧಿಕಾರಿಗಳು ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಡಿಡಿಪಿಐ ಹನುಮಂತಪ್ಪ ಬಿ ಅವರು ಮಾತನಾಡಿ, ಹೈ-ಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿರುವ 523 ಹುದ್ದೆಗಳಿಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ, ನ. 18 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1 ರವರೆಗೆ ಸಾಮಾನ್ಯ ಪತ್ರಿಕೆ. ಮಧ್ಯಾಹ್ನ 2-30 ರಿಂದ 5-30 ರವರೆಗೆ ಭಾಷೆ ಆಂಗ್ಲ ವಿಷಯದ ಪತ್ರಿಕೆ ಪರೀಕ್ಷೆ ನಡೆಯಲಿದೆ. ನ. 19 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಗಣಿತ ವಿಜ್ಞಾನ ಮತ್ತು ಸಮಾಜ ಪಾಠಗಳ ಪತ್ರಿಕೆ. ಮಧ್ಯಾಹ್ನ 2-30 ರಿಂದ ಮಧ್ಯಾಹ್ನ 4-30 ರವರೆಗೆ ಭಾಷಾ ಸಾಮಥ್ರ್ಯದ ಪತ್ರಿಕೆ ಪರೀಕ್ಷೆ ಜರುಗಲಿದೆ.
ಉಳಿದ ಮೂಲ ವೃಂದಕ್ಕೆ ಮೀಸಲಿರುವ 133 ಹುದ್ದೆಗಳಿಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ, ನ. 25 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1 ರವರೆಗೆ ಸಾಮಾನ್ಯ ಪತ್ರಿಕೆ. ಮಧ್ಯಾಹ್ನ 2-30 ರಿಂದ 5-30 ರವರೆಗೆ ಭಾಷೆ ಆಂಗ್ಲ ವಿಷಯದ ಪತ್ರಿಕೆ ಪರೀಕ್ಷೆ ನಡೆಯಲಿದೆ. ನ. 26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಗಣಿತ ವಿಜ್ಞಾನ ಮತ್ತು ಸಮಾಜ ಪಾಠಗಳ ಪತ್ರಿಕೆ. ಮಧ್ಯಾಹ್ನ 2-30 ರಿಂದ ಮಧ್ಯಾಹ್ನ 4-30 ರವರೆಗೆ ಭಾಷಾ ಸಾಮಥ್ರ್ಯದ ಪತ್ರಿಕೆ ಪರೀಕ್ಷೆ ಜರುಗಲಿದೆ ಎಂದರು.
ಸಭೆಯಲ್ಲಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿಯಾದ ವಿಷಯ ಪರಿವೀಕ್ಷಕ ಬಡದಾನಿ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

loading...