ಪರಿವರ್ತನಾ ಯಾತ್ರೆಗೆ ಹರಿದು ಬಂದ ಜನಸಾಗರ

0
35
loading...

ಹಳಿಯಾಳ: ಇಲ್ಲಿನ ಶಿವಾಜಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನೆರವೇರಿದ ಭಾಜಪ ಪರಿವರ್ತನಾ ಯಾತ್ರೆ ಸಮಾವೇಶಕ್ಕೆ ಭಾರಿ ಜನಸ್ತೋಮ ಜಮಾವಣೆಗೊಂಡಿತ್ತು. ಸಂಘಟಕರ ನಿರೀಕ್ಷೆಯಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಸಂಖ್ಯೆಯ ಜನರಿಂದ ಸಮಾವೇಶವು ಯಶಸ್ಸು ಕಂಡಿತು.
ಯಾತ್ರೆ ನೇತೃತ್ವ ವಹಿಸಿರುವ ಭಾಜಪ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡುತ್ತಾ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ, ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಸಂಪರ್ಕ, ಜಾತಿ-ಬೇಧವಿಲ್ಲದೇ ಸರ್ವ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಒದಗಿಸಿದ್ದು ಮೊದಲಾದವುಗಳ ಬಗ್ಗೆ ವಿವರಿಸಿದರು.

ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ನೆಲಕಚ್ಚಿದೆ. ಭ್ರಷ್ಟಾಚಾರ ಮೇರೆ ಮೀರಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರವು ಪ್ರತಿ ಕೆಜಿಗೆ 32 ರೂ.ಗಳಿಗೆ ಅಕ್ಕಿ ಖರೀದಿಸಿ ಕೇವಲ 3 ರೂ.ಗಳಂತೆ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಪಡಿತರ ವಿತರಣೆಯ ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಮೊತ್ತ ಪ್ರತಿ ಕೆಜಿಗೆ 29 ರೂ. ಇದ್ದರೆ, ರಾಜ್ಯ ಸರ್ಕಾರದ್ದು ಕೇವಲ 3 ರೂ. ಮಾತ್ರವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನ್ನಭಾಗ್ಯ ಯೋಜನೆಯ ಸಂಪೂರ್ಣ ಹೊಣೆಗಾರರು ತಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕಾಳಿನದಿ ನೀರಾವರಿ ಯೋಜನೆಯನ್ನು ಇನ್ನೂವರೆಗೂ ಅನುಷ್ಠಾನಗೊಳಿಸದೇ ಇರುವ ಈ ಭಾಗದ ಶಾಸಕರಾಗಿರುವ ರಾಜ್ಯ ಸರ್ಕಾರದ ಸಚಿವ ಆರ್.ವಿ. ದೇಶಪಾಂಡೆಯವರನ್ನು ಮುಂಬರುವ ಚುನಾವಣೆಯಲ್ಲಿ ಮನೆಗೆ ಕಳುಹಿಸಿ ಎಂದು ಹೇಳಿದ ಯಡಿಯೂರಪ್ಪ ಇಂದಿನ ಸಮಾವೇಶದಲ್ಲಿ ಹೆಚ್ಚು ಸೇರಿಸಿದ ಮಾಜಿ ಶಾಸಕ ಸುನೀಲ ಹೆಗಡೆಯವರ ಶ್ರಮ ಅಭಿನಂದನೀಯವಾಗಿದೆ ಎಂದರು.

ಮಾಜಿ ಸಚಿವರಾದ ಶೋಭಾ ಕರಂದ್ಲಾಚೆ, ಪ್ರಹ್ಲಾದ ಜೋಶಿ ಸಾಂದರ್ಭಿಕವಾಗಿ ಮಾತನಾಡಿದರು. ಪಕ್ಷದ ಜಿಲ್ಲೆಯ ಉಸ್ತುವಾರಿ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಸಿ.ಎಂ. ಉದಾಸಿ, ಕುಂಬಾರ್ಡಾದ ಹಂಡಿಬಡಂಗನಾಥ ಮಠದ ಸಾಗರನಾಥ ಸ್ವಾಮೀಜಿ, ಜಿಲ್ಲಾಧ್ಯಕ್ಷ ಕೃಷ್ಣಾ ಜಿ. ನಾಯ್ಕ, ಜಿಲ್ಲೆಯ ಮುಖಂಡರಾದ ರೂಪಾಲಿ ನಾಯ್ಕ, ವಿ.ಎಸ್. ಪಾಟೀಲ, ಸೂರಜ ನಾಯ್ಕ ಸೋನಿ, ಕ್ಷೇತ್ರದ ಮೂವರು ಅಧ್ಯಕ್ಷರಾದ ಶಿವಾಜಿ ನರಸಾನಿ, ಬಸವರಾಜ ಕಲಶೆಟ್ಟಿ, ತುಕಾರಾಮ ಮಾಂಜ್ರೇಕರ, ಪ್ರಮುಖರಾದ ವ್ಹಿ.ಡಿ. ಹೆಗಡೆ, ಎಸ್.ಎ. ಶೆಟವಣ್ಣವರ, ಗಣಪತಿ ಕರಂಜೇಕರ, ಮಂಗೇಶ ದೇಶಪಾಂಡೆ, ಜಿ.ಆರ್. ಪಾಟೀಲ, ಅನಿಲ ಮುತ್ನಾಳೆ, ವಾಸುದೇವ ಪೂಜಾರಿ, ಸಂತೋಷ ಘಟಕಾಂಬ್ಳೆ, ಅಪ್ಪು ಚರಂತಿಮಠ, ಮೋಹನ ಬೆಳಗಾಂವಕರ, ವಿ.ಎಂ. ಪಾಟೀಲ, ಜಯಲಕ್ಷ್ಮೀ ಚವ್ಹಾಣ, ಮುಸ್ತಾಕ ಶೇಖ, ಗಿರೀಶ ಟೋಸೂರ, ಸುಧಾಕರ ರೆಡ್ಡಿ ಮೊದಲಾದವರು ವೇದಿಕೆಯಲ್ಲಿದ್ದರು.

loading...