13ಲಕ್ಷ ರೂ. ಮೌಲ್ಯದ ಆಭರಣ ವಶ

0
24
loading...

ಹಳಿಯಾಳ: ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಹಳಿಯಾಳ ಪಟ್ಟಣ, ಹವಗಿ, ತೇರಗಾಂವ ಗ್ರಾಮಗಳು ಮಾತ್ರವಲ್ಲದೇ ಹುಬ್ಬಳ್ಳಿಯಲ್ಲಿ ಮನೆ ಕಳ್ಳತನ ಮಾಡಿ ಬಂಗಾರದ ಆಭರಣಗಳನ್ನು ಕಳುವು ಮಾಡಿದ್ದ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಅಂತೂ 13 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳ್ಳತನ ಭೇದಿಸಿದ ಇದು ಇಲ್ಲಿನ ಠಾಣೆಯಲ್ಲಿ ದಾಖಲೆಯಾಗಿದೆ.
ಹಳಿಯಾಳ ಪಟ್ಟಣದ ಕೆಎಚ್‍ಬಿ ಕಾಲನಿ ನಿವಾಸಿಗಳಾದ ಶಿಕ್ಷಕ ದಂಪತಿಯ ಮನೆಯಿಂದ 80 ಗ್ರಾಂ., ಹವಗಿಯ ನರ್ಸ್ ಮನೆಯೊಂದರಿಂದ 80 ಗ್ರಾಂ. ಹಾಗೂ ಬ್ಯೂಟಿಪಾರ್ಲರ್ ಮಾಲೀಕ ಮಹಿಳೆಯೊಬ್ಬರ ತೇರಗಾಂವ ಗ್ರಾಮದ ಮನೆಯಿಂದ 80 ಗ್ರಾಂ. ಮಾತ್ರವಲ್ಲದೇ ಹುಬ್ಬಳ್ಳಿಯ ಕೆಲ ಮನೆಗಳಿಂದ ಒಟ್ಟು 220 ಗ್ರಾಂ ಹೀಗೆ ಒಟ್ಟು 430 ಗ್ರಾಮ (13 ಲಕ್ಷ ರೂ. ಮೌಲ್ಯ) ಮಂಗಳಸೂತ್ರಗಳು, ಲಕ್ಷ್ಮೀ ಹಾರಗಳು, ಕಿವಿಯೋಲೆಗಳು, ನಕ್ಲೆಸ್‍ಗಳು, ಉಂಗುರಗಳು, ಕರಿಮಣಿ ತಾಳಿಸರಗಳು ಮೊದಲಾದ ಬಂಗಾರದ ಆಭರಣಗಳನ್ನು ಮಾತ್ರವಲ್ಲದೇ ಕಳುವು ಮಾಡಲು ಉಪಯೋಗಿಸಿದ ಬೈಕ್, 10 ಸಾವಿರ ರೂ. ನಗದು, ಮನೆ ಬಾಗಿಲ ಚಿಲಕ ಒಡೆಯುವ ಸಾಮಗ್ರಿಗಳು, 2 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರು:- ಹಳೇಹುಬ್ಬಳ್ಳಿಯ ಬಂಕಾಪುರ ಚೌಕ ಮೂಲದವನಾದ ಗೋವಾದ ಮಡಗಾಂವ ಮೀನು ಮಾರುಕಟ್ಟೆ ಮತ್ತು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳಿಕಟ್ಟಿ ಗ್ರಾಮದ ಹಾಲಿ ನಿವಾಸಿಯಾಗಿರುವ ಗೌಂಡಿ ಮೂಲ ವೃತ್ತಿಯವನಾದ ಹುಸೇನಸಾಬ (ಹುಸೇನಿ) ಇಮಾಮಸಾಬ ಕನವಳ್ಳಿ (23 ವರ್ಷ ವಯಸ್ಸು) ಮತ್ತು ಹಳೇಹುಬ್ಬಳ್ಳಿಯ ಯಲ್ಲಾಪುರ ಓಣಿ ಗೊಲ್ಲರಕಾಲನಿ ಬಂಕಾಪುರ ಚೌಕದ ನಿವಾಸಿ ಉಸುಕಿನ ಹಮಾಲಿ ಮೂಲ ವೃತ್ತಿಯ ರಾಜು (ಜಂಗ್ಲ್ಯಾ) ಗಡೆಪ್ಪಾ ಬಿಲಾಲ (29 ವರ್ಷ).
ಕಾರ್ಯಾಚರಣೆ:- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ್ ಮತ್ತು ದಾಂಡೇಲಿ ಉಪವಿಭಾಗದ ಡಿವೈಎಸ್ಪಿ ದಯಾನಂದ ಪವಾರ ಇವರುಗಳ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಸುಂದ್ರೇಶ ಹೊಳೆಣ್ಣವರ, ಪಿಎಸ್‍ಐ ಎಂ.ಎಸ್. ಹೂಗಾರ ಇವರುಗಳ ನಿರ್ದೇಶನದಲ್ಲಿ ಎಎಸ್‍ಐಗಳಾದ ಎ.ಡಿ. ಪಾವಸ್ಕರ, ಪಿ.ಎಂ. ಸೊಲ್ಲಾಪುರಿ, ಸಿಬ್ಬಂದಿಗಳಾದ ಅಶೋಕ ಹುಬ್ಬಳ್ಳಿ, ಸಂಜು ಅಣ್ಣಿಗೇರಿ, ಗೋವಿಂದ ಉಪ್ಪಾರ, ಜಗದೀಶ ಕುಂಬಾರ, ಪರಶುರಾಮ, ನಿಂಗಪ್ಪಾ ಬಳ್ಳಾರಿ, ಮಂಜುನಾಥ ದೊಣ್ಣಿ, ಗುರೆಪ್ಪಾ ವಡ್ಡರ್, ನವೋಮಿ, ನಾಗರಾಜ ನಾಯ್ಕ, ರಮೇಶ ಕಾರಬಾರಿ, ಗುರುರಾತ ಬಿಷ್ಟನ್ನವರ, ಗೃಹರಕ್ಷಕರಾದ ಬಾಬು ಹಾಗೂ ಉಪ್ಪಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

loading...