ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು

0
30
loading...

ಧಾರವಾಡ- ಜಿಲ್ಲೆಯ ಮತದಾರರ ಯಾದಿ ಪರಿಷ್ಕರಣೆಯ ಕುರಿತು ಮೊದಲ ಹಂತದ ಪ್ರಗತಿಯನ್ನು ಇಂದು, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿ ವಿಭಾಗದ ಮತದಾರ ಯಾದಿ ವೀಕ್ಷಕ ಶಿವಯೋಗಿ ಕಳಸದ ಅವರು ಪರಿಶೀಲನೆ ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾಧಿಸಿದ ಮೊದಲ ಹಂತದ ಪ್ರಗತಿಯನ್ನು ಪರಿಶೀಲಿಸಿ, ಮತದಾರರ ಪಟ್ಟಿಗೆ ಹೊಸ ಹೇಸರುಗಳ ಸೇರ್ಪಡೆ, ಸ್ವೀಕೃತ ಅರ್ಜಿಗಳ ಸಂಖ್ಯೆ, ಬಿಟ್ಟುಬಿಡತಕ್ಕ ವಿವರಗಳು, ಹೊಸ ಮತಗಟ್ಟೆ ಸ್ಥಾಪನೆ, ಮತಗಟ್ಟೆಗಳಿಗೆ ಮತಗಟ್ಟೆಮಟ್ಟದ ಅಧಿಕಾರಿಗಳ ನೇಮಕ ಹಾಗೂ ಅವರ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು. ರಾಜಕೀಯ ಪಕ್ಷಗಳ ವತಿಯಿಂದ ಮತಗಟ್ಟೆ ಮಟ್ಟದ ಏಜೇಂಟರ ನೇಮಕ ಕುರಿತು ತಿಳಿಸಿದರು. ಬರುವ 29ರ ಶುಕ್ರವಾರ, ಮತದಾರರ ಯಾದಿಗೆ ಹೊಸ ಸೇರ್ಪಡೆ ಹಾಗೂ ಅವಶ್ಯಕ ಮಾಹಿತಿ ಸ್ವೀಕರಿಸುವ ಕೊನೆಯ ದಿನವಾಗಿದ್ದು ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ಜರುಗಿಸಿ ಪ್ರತಿ ಮತಗಟ್ಟೆಗಳಿಗೆ ತಮ್ಮ ಪಕ್ಷದ ಏಜೆಂಟರನ್ನು ನೇಮಿಸಿ ಮಾಹಿತಿ ಸಲ್ಲಿಸಲು ಈಗಾಗಲೇ ಸೂಚಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೆ ರಾಜಕೀಯ ಪಕ್ಷ ಈ ಮಾಹಿತಿಯನ್ನು ಚುನಾವಣಾ ವಿಭಾಗಕ್ಕೆ ಸಲ್ಲಿಸಿರುವುದಿಲ್ಲ. ತಕ್ಷಣ ಈ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಏಜೆಂಟರ ನೇಮಕಾತಿ ಕುರಿತು ಮಾಹಿತಿ ನೀಡುವಂತೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಿದರು. ಅಂತಿಮ ಹಂತದ ಮತದಾರರ ಪಟ್ಟಿಯ ಪರಿಷ್ಕರಣೆಗೆ ಡಿಸೆಂಬರ್ 29, 2017 ಕೊನೆಯ ದಿನವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಂಡು ಎಲ್ಲ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರುವಂತೆ ಸಹಕರಿಸಬೇಕೆಂದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಚುನಾವಣಾ ತಹಸಿಲ್ದಾರ ಬಿ.ವ್ಹಿ.ಲಕ್ಷ್ಮೇಶ್ವರ, ಧಾರವಾಡ ತಹಸಿಲ್ದಾರ ಪ್ರಕಾಶ ಕುದರಿ, ಮಹಾನಗರ ಪಾಲಿಕೆಯ ಅಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಚುನಾವಣಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

loading...