ಅನ್ನಭಾಗ್ಯದ ತೊಗರಿಬೇಳೆ ಪ್ಯಾಕೇಟಿನಲ್ಲಿ ಹುಳು

0
20
loading...

ಅನ್ನಭಾಗ್ಯದ ತೊಗರಿಬೇಳೆ ಪ್ಯಾಕೇಟಿನಲ್ಲಿ ಹುಳು|| ಬಡವರ ಪೌಷ್ಠಿಕಾಂಶ ವೃದ್ಧಿಯ ಆಶಯಕ್ಕೆ ಭಂಗ || ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ||

ಶಿವಾನಂದ ಪದ್ಮಣ್ಣವರ

ಚಿಕ್ಕೋಡಿ 24: ರಾಜ್ಯ ಸರಕಾರ ಬಡವರ ಹಸಿವು ನೀಗಿಸುವ ಉದ್ದೇಶದಿಂದ ರೂಪಿಸಿರುವ ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗುವ ತೊಗರಿಬೇಳೆ ಪ್ಯಾಕೇಟಿನಲ್ಲಿ ಹುಳು ಮಿಶ್ರಿತ ಬೇಳೆ ಪೂರೈಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಹೌದು, ಪ್ರತಿ ಬಡ ಕುಟುಂಬಕ್ಕೂ ಪೌಷ್ಠಿಕಾಂಶದ ಆಹಾರ ದೊರೆಯುವ ಉದ್ದೇಶದಿಂದ ಸರಕಾರ ದುಬಾರಿ ಬೆಲೆಯಲ್ಲಿ ತೊಗರಿ ಬೇಳೆಯನ್ನು ಖರೀದಿಸಿ ಕೇವಲ 38 ರೂಪಾಯಿಗೆ ವಿತರಣೆ ಮಾಡುತ್ತಲಿದೆ. ಆದರೆ ತೊಗರಿ ಬೇಳೆ ಪೂರೈಕೆ ಗುತ್ತಿಗೆ ಪಡೆದಿರುವ ಕಂಪನಿಗಳು ಕಳಪೆ ಮಟ್ಟದ ಬೇಳೆ ಬಡವರಿಗೆ ವಿತರಣೆ ಮಾಡುವ ಮೂಲಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಮಸಿ ಬಳೆದಂತಾಗಿದೆ. 2017ರ ನವೆಂಬರ ತಿಂಗಳಲ್ಲಿ ತಯಾರಿಸಲಾಗಿರುವ ಪಾಕೇಟ್‌ ತೊಗರಿ ಬೇಳೆಯಲ್ಲಿ ಹುಳು ಕಾಣಿಸಿಕೊಳ್ಳುತ್ತಿದ್ದು, ಉದ್ದೇಶ ಪೂರ್ವಕವಾಗಿಯೇ ಕಳಪೆ ಗುಣಮಟ್ಟದ ತೊಗರಿ ಬೇಳೆ ಪೂರೈಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಬಂದಿದೆ. ಬಡವರು ಪುಕ್ಕಟೆಯಾಗಿ ಪಡೆಯುವ ಅಕ್ಕಿ, ಗೋಧಿಗಳಲ್ಲಿ ಹುಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಪೌಷ್ಠಿಕಾಂಶ ವೃದ್ಧಿಗಾಗಿ ಪೂರೈಸುವ ಬೇಳೆ ಪಾಕೇಟಿನಲ್ಲಿ ಹುಳು ಕಾಣಿಸಿಕೊಂಡಿದೆ.ಕಳಪೆ ಗುಣಮಟ್ಟ: ಬಡವರು ಬೇಳೆ ಕಾಳು ಖರೀದಿಸುವುದು ಕಷ್ಟಸಾಧ್ಯವೆನ್ನುವ ಉದ್ದೇಶದಿಂದ ಸರಕಾರ ರಾಜ್ಯದ ಪ್ರಮುಖ ಬೆಳೆಯಾಗಿರುವ ತೊಗರಿಯನ್ನು ವಿತರಿಸುವ ಮೂಲಕ ಬಡಜನರಿಗೆ ಪೌಷ್ಠಿಕಯುತ ಆಹಾರ ವಿತರಣೆಗೆ ಕ್ರಮ ಕೈಕೊಂಡಿದೆ. ಆದರೆ ತೊಗರಿ ಬೇಳೆ ವಿತರಣೆ ಸರಕಾರದ ಮೂಲ ಆಶಯಕ್ಕೆ ಧಕ್ಕೆ ತರುವ ಕೆಲಸವನ್ನು ತೊಗರಿ ಬೇಳೆ ಪೂರೈಸುವ ಕಂಪನಿಗಳು ಮಾಡುತ್ತಲಿದ್ದು, ತೊಗರಿ ಬೇಳೆ ಗುಣಮಟ್ಟದಲ್ಲಿಯೂ ವ್ಯತ್ಯಾಸ ಕಂಡುಬರುವ ಜೊತೆಗೆ ತೊಗರಿ ಬೇಳೆ ಪ್ಯಾಕೇಟಿನಲ್ಲಿ ಹುಳು ಕಾಣಿಸಿಕೊಂಡಿರುವದರಿಂದ ಸರಕಾರದ ಅನ್ನಭಾಗ್ಯದ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗಿದೆ.

ಕ್ರಮಕ್ಕೆ ಸಾರ್ವಜನಿಕರ ಆಗ್ರಹ: ಬಡವರಿಗೆ ಸಿಗುತ್ತಿರುವ ಆಹಾರ ಧಾನ್ಯಗಳ ಬಗೆಗೆ ಎಲ್ಲರಿಗೂ ತಾತ್ಸಾರ ಭಾವನೆ ಉಂಟಾಗುತ್ತಲಿದ್ದು, ಇತ್ತೀಚಿಗೆ ಅಕ್ಕಿ, ಗೋಧಿಗಳಲ್ಲಿ ಹುಳು ಕಾಣಿಸಿಕೊಂಡರೂ ಅನಿವಾರ್ಯವಾಗಿ ತಿನ್ನಬೇಕಾಗುತ್ತಿತ್ತು. ಆದರೆ ಪೌಷ್ಠಿಕ ಆಹಾರವಾಗಿ ವಿತರಣೆ ಮಾಡಲಾಗುತ್ತಿರುವ ತೊಗರಿ ಬೇಳೆ ಪ್ಯಾಕೇಟಿನಲ್ಲಿಯೂ ಹುಳು ಕಾಣಿಸಿಕೊಂಡಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೀದರನ ಮಹಾಲಕ್ಷ್ಮೀ ದಾಲ ಮಿಲ್‌ ವಿತರಣೆ ಮಾಡುತ್ತಿರುವ ನವೆಂಬರ ತಿಂಗಳು ಉತ್ಪಾದಿಸಲಾಗಿರುವ ಪ್ಯಾಕೇಟ್‌ನಲ್ಲಿ ಹುಳು ಕಾಣಿಸಿಕೊಂಡಿದ್ದು, ಪೂರೈಕೆದಾರರ ಮೇಲೆ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ ಸರಕಾರ ಬಡವರ ಹಸಿವು ನೀಗಿಸುವ ಉದ್ದೇಶದಿಂದ ರೂಪಿಸುವ ಯೋಜನೆ ಹಳ್ಳ ಹಿಡಿಯುತ್ತಿದ್ದು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಿಕ ಇಲಾಖೆ ಅಧಿಕಾರಿಗಳು ಕ್ರಮ ಕೈಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

loading...