ಆಯಷಸ್ ಟೆಸ್ಟ್ ಸರಣಿ: ಮತ್ತೆ ಮುಗ್ಗರಿಸಿದ ಇಂಗ್ಲೆಂಡ್

0
15
loading...

ಅಡಿಲೇಡ್: ಕ್ರಿಕೆಟ್ ಜಗತ್ತಿನ ಪ್ರತಿಷ್ಠಿತ ಕದನ ಎಂದೇ ಹೆಸರಾಗಿರುವ ಆಸೀಸ್-ಇಂಗ್ಲೆಂಡ್ ನಡುವಿನ ಆಯಷಸ್ ಸರಣಿಯ ಎರಡನೇ ಪಂದ್ಯದಲ್ಲೂ ಆಸೀಸ್ 120 ರನ್‍ಗಳ ಜಯ ಗಳಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ 442 ರನ್ ಗಳಿಸಿತ್ತು. ಶಾನ್ ಮಾರ್ಷ್ ಶತಕ (125) ಹಾಗೂ ಉಸ್ಮಾನ್ ಖವಾಜ (53), ಟಿಮ್ ಫೈನ್ (57) ಅರ್ಧ ಶತಕ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ ಆಸೀಸ್ ದಾಳಿಗೆ ಸಿಲುಕಿ ಕೇವಲ 227 ರನ್‍ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ನಥನ್ ಲಯನ್ 4 ವಿಕೆಟ್, ಸ್ಟಾರ್ಕ್ 3 ವಿಕೆಟ್ ಪಡೆದು ಇಂಗ್ಲೆಂಡ್ ಪತನಕ್ಕೆ ಕಾರಣರಾದರು. 215 ರನ್‍ಗಳ ಬೃಹತ್ ಮುನ್ನಡೆ ಪಡೆದ ಆಸೀಸ್ ಎರಡನೇ ಇನ್ನಿಂಗ್ಸ್‍ನಲ್ಲಿ ನಾಟಕೀಯ ಕುಸಿತ ಕಂಡು ಕೇವಲ138 ರನ್‍ಗಳಿಗೆ ಆಲೌಟ್ ಆಯಿತು. ವೇಗಿ ಆ?ಯಂಡರ್‍ಸನ್(5 ವಿಕೆಟ್) ಹಾಗೂ ಕ್ರಿಸ್ ವೋಕ್ಸ್(4ವಿಕೆಟ್) ಅವರ ಮೊನಚಿನ ದಾಳಿ ಮುಂದೆ ಯಾವೊಬ್ಬ ಆಸೀಸ್ ಬ್ಯಾಟ್ಸಮನ್ ಕೂಡ 20 ರ ಗಡಿ ದಾಟಲಾಗಲಿಲ್ಲ.
ನಂತರ 353 ರನ್‍ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕುಕ್ 16 ರನ್ ಗಳಿಸಿ ಔಟಾದರೆ, ಸ್ಟೋನ್‍ಮನ್ 36 ರನ್ ಗಳಿಸಿದರು. ಇವರ ನಂತರ ನಾಯಕ ಜೋ ರೂಟ್ (67) ಕೊಂಚ ಪ್ರತಿರೋಧ ತೋರಿದರಾದರೂ ಅವರಿಗೆ ಸರಿಯಾದ ಬೆಂಬಲ ಸಿಗದಿದ್ದರಿಂದ ಸೋಲನಭವಿಸಬೇಕಾಯಿತು.
ಎರಡು ಇನ್ನಿಂಗ್ಸ್‍ನಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಆಸೀಸ್ ಬೌಲರ್‍ಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡು ಇನ್ನಿಂಗ್ಸ್ ಸೇರಿ ಮಿಚೆಲ್ ಸ್ಟಾರ್ಕ್ 8 ವಿಕೆಟ್ ಪಡೆದರೆ, ನಥನ್ ಲಯನ್ 6 ವಿಕೆಟ್ ಪಡೆದು ಮಿಂಚಿದರು.ಹೇಜಲ್‍ವುಡ್ ಎರಡನೇ ಇನಿಂಗ್ಸ್‍ನಲ್ಲಿ ರೂಟ್ ವಿಕೆಟ್ ಸೇರಿ ಒಟ್ಟು 3 ವಿಕೆಟ್ ಪಡೆದರು.
ಮೂರನೇ ಪಂದ್ಯ ಡಿಸೆಂಬರ್ 14 ರಿಂದ ಪರ್ತ್‍ನಲ್ಲಿ ನಡೆಯಲಿದ್ದು, ಈ ಪಂದ್ಯ ಇಂಗ್ಲೆಂಡ್ ಪಾಲಿಗೆ ನಿರ್ಣಾಯಕವೆನಿಸಲಿದೆ. ಈ ಪಂದ್ಯ ಸೋತರೆ ಸರಣಿ ಆಸೀಸ್ ಪಾಲಾಗಲಿದ್ದು, ಮುಂದಿನ ಎರಡು ಪಂದ್ಯಗಳು ಮಹತ್ವ ಕಳೆದುಕೊಳ್ಳಲಿವೆ.

loading...