ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಮನವಿ

0
20
loading...

ಮುಂಡಗೋಡ: ಜಿಲ್ಲೆಯ ಹೊನ್ನಾವರದಲ್ಲಿ ಹತ್ಯೆಯಾದ ಪರೇಶ ಮೇಸ್ತಾ ಕುಟುಂಬಕ್ಕೆ ಪರಿಹಾರ ನೀಡುವುದರೊಂದಿಗೆ ಹತ್ಯೆಯ ಆರೋಪಿಗಳನ್ನು ಬಂದಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸೋಮವಾರ ಬಿ.ಜೆ.ಪಿ ತಾಲೂಕಾ ಘಟಕ ಹಾಗೂ ಹಿಂದೂಪರ ಸಂಘಟನೆಗಳಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ ಟಾಯರ್‌ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಸುಮಾರು 1 ಗಂಟೆ ಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ದಿನದಿಂದ ದಿನಕ್ಕೆ ಹಿಂದೂ ಕಾರ್ಯಕರ್ತರ ಹತ್ಯೆಗಳೇ ಹೆಚ್ಚಾಗುತ್ತಿವೆ. ಗೃಹ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ರಕ್ಷಣೆ ನೀಡಬೇಕಾದ ಪೊಲೀಸ ಅಧಿಕಾರಿಗಳು ಆಳುವ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 19 ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿವೆ. ಹೊನ್ನಾವರದಲ್ಲಿ ಪರೇಶ ಮೇಸ್ತಾ ಎನ್ನುವ ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಕಳೆದ 5 ದಿನಗಳ ಹಿಂದೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ.
ಈ ಹತ್ಯೆಯ ಕ್ರೂರತೆಯು ಇಡೀ ಮನುಕುಲವನ್ನೇ ಚಿಂತೆಗೀಡುಮಾಡಿದೆ. ರಾಜ್ಯದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಪರೇಶ ಮೇಸ್ತಾ ಹತ್ಯೆಯ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡುವುದರೊಂದಿಗೆ ಮೃತನ ಕುಟುಂಬಕ್ಕೆ ಸರ್ಕಾರದಿಂದ 25ಲಕ್ಷರೂ. ಪರಿಹಾರ ನೀಡಬೇಕು ಹಾಗೂ ನಿದ್ರಾ ವ್ಯವಸ್ಥೆಯಲ್ಲಿರುವ ರಾಜ್ಯದ ಕಾಂಗ್ರೆಸ ಸರ್ಕಾರವನ್ನು ಎಚ್ಚರಿಸಿ, ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಿ ಜನಸಾಮಾನ್ಯರು ನೆಮ್ಮದಿ ಬದುಕು ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿಯ ಮೂಲಕ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ಗುಡ್ಡಪ್ಪಾ ಕಾತೂರ, ಮಾಜಿ ಶಾಸಕ ವಿ.ಎಸ್‌.ಪಾಟೀಲ್‌, ಮಹೇಶ ಹೊಸಕೊಪ್ಪ, ಅಶೋಕ ಚಲವಾದಿ, ಡಿ.ಜೆ.ಕುಲಕರ್ಣಿ, ವಿಠ್ಠಲ್‌ ಬಾಳಂಬೀಡ, ಸುಮನ್‌ ಕುಲಕರ್ಣಿ, ವಾಯ್‌.ಪಿ.ಪಾಟೀಲ್‌, ಸುಭಾಸ ಲಮಾಣಿ, ಪಿ.ಜಿ.ತಂಗಚನ್‌, ಶ್ರೀರಾಮ ಸೇನೆ, ಹಿಂದೂ ಜಾಗರಣಾ ವೇದಿಕೆ ಮತ್ತು ಭಜರಂಗದಳ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಸ್ತೆ ತಡೆ ನಡೆಸಿರುವ ಪರಿಣಾಮವಾಗಿ ಕೆಲ ಸಮಯ ವಾಹನ ಸಂಚಾರ ಅಸ್ಥವ್ಯಸ್ಥವಾಯಿತು.

loading...