ಇಂದಿರಾ ಕ್ಯಾಂಟಿನ್‌ಗೆ ಶಾಲಾ ಮಂಡಳಿಯ ಆಕ್ರೋಶ

0
25
loading...

ಕಾರವಾರ: ಸರಕಾರಿ ಶಾಲಾ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ತೆರೆಯಲು ಜಿಲ್ಲಾಡಳಿತ ಮುಂದಾಗಿದ್ದು, ಇದು ಶಾಲಾ ಅಭಿವೃದ್ಧಿ ಮಂಡಳಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ಉಪಹಾರ ಊಟ ನೀಡಿ ಯಶಸ್ವಿಯಾದ ಬಳಿಕ ಸರಕಾರ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಆರಂಭಿಸಲು ಮುಂದಾಗಿದೆ. ಅದರಂತೆ ನಗರದ ಬಾಡ 1 ಸರ್ವೆ,ನಂ 494ಡ ದ ಹಿಂದೂ ಹೈಸ್ಕೂಲ ಬಳಿ ಇರುವ ಬಾಯಿಕುವರಬಾಯಿ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ಆವಾರದಲ್ಲಿ ಇಂದಿರಾ ಕ್ಯಾಂಟಿನ್‌ ತೆರೆಯಲು ಯೋಜನೆ ರೂಪಿಸಿದೆ. ಆದರೆ ಇದಕ್ಕೆ ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಪಾಲಕರಿಂದ ವಿರೋಧ ವ್ಯಕ್ತವಾಗಿದೆ.
ಶಾಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಶಾಲಾ ಆವರಣದಲ್ಲಿ ನೂತನ ಶಾಲಾ ಕಟ್ಟಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ ಸೇರಿದಂತೆ ಇನ್ನಿತರ ಕಾರಣಗಳಿಗೆ ಬಳಕೆಯಾಗಿ ವಿದ್ಯಾರ್ಥಿಗಳಿಗೆ ಆಟವಾಡಲು ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಕ್ಯಾಂಟಿನ್‌ ಆರಂಭಿಸಿದಲ್ಲಿ ಶಾಲಾ ಆವರಣದಲ್ಲಿ ಜನರ ದಂಡೆ ನೆರೆದಿರುತ್ತದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ತೊಂದರೆ ಬೀರುವ ಸಾಧ್ಯತೆ ಇದೆ. ಜತೆಗೆ ತೆರೆದ ಕ್ಯಾಂಟಿನ್‌ ಆಗಿರುವುದರಿಂದ ಮಕ್ಕಳು ತಿನನುವುದನ್ನು ನೋಡುತ್ತಿರುವ ಸಂದರ್ಭಗಳು ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ಯಾಂಟಿನ್‌ನನ್ನು ಬೇರೆಡೆ ಸ್ಥಳಾಂತರಿಸಬೇಕು ಎನ್ನುವುದು ಶಾಲಾ ಅಭಿವೃದ್ಧಿ ಸಮಿತಿಯವರ ಒತ್ತಾಯ.
ನಗರದ ಹೃದಯ ಭಾಗದಲ್ಲಿರುವ ಎರಡು ಶಾಲೆಗಳ ಜಾಗ ಸುಮಾರು 21 ಗುಂಟೆ ಇದೆ. ಆದರೆ ಕಳೆದ ಎರಡು ವರ್ಷದ ಹಿಂದೆ ಕಾರವಾರ ಕೋಡಿಭಾಗ ರಸ್ತೆಗೆ ಸುಮಾರು 1 ಗುಂಟೆ ಜಾಗ ಹೋಗಿದೆ. 1 ಗುಂಟೆ ಜಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವಿದೆ. 9 ಗುಂಟೆ ಜಾಗದಲ್ಲಿ ಶಾಲಾ ಕಟ್ಟಡಗಳಿವೆ. ಉಳಿದ ಜಾಗದಲ್ಲಿ ಶಾಲಾ ಹಾಗೂ ಬಿಇಓ ಕಚೇರಿ ಶೌಚಾಲಯ ಇದೆ. ಇನ್ನುಳಿದ ಜಾಗದಲ್ಲಿ ವಿದ್ಯಾರ್ಥಿಗಳು ಆಟವಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ 2400 ಚದರ ಅಡಿ ಜಾಗವನ್ನು ಇಂದಿರಾ ಕ್ಯಾಂಟೀನ್‌ಗೆ ಬಳಕೆ ಮಾಡಿಕೊಂಡಲ್ಲಿ ಮಕ್ಕಳಿಗೆ ಆಟವಾಡಲು ಜಾಗವೇ ಇಲ್ಲದಂತ ಸ್ಥಿತಿ ನಿರ್ಮಾಣವಾಗುತ್ತದೆ. ಕೂಡಲೇ ಜಿಲ್ಲಾಡಳಿತ ಕ್ಯಾಂಟಿನ್‌ ಸ್ಥಳಾವಕಾಶವನ್ನು ಬದಲಿಸಬೇಕು ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಗಾಂವ್ಕರ್‌.

loading...