ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ

0
27
loading...

ಕನ್ನಡಮ್ಮ ಸುದ್ದಿ-ಗೋಕಾಕ: ಮೂಡಲಗಿ ವಲಯದ ಸರ್ಕಾರಿ ಪ್ರೌಢ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಇಲ್ಲಿನ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಇಒ ಎ ಸಿ. ಗಂಗಾಧರ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಇಂತಹ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ. ಹಾಗಾಗಿ ಪ್ರವಾಸದ ಸಂದರ್ಭದಲ್ಲಿ ಪ್ರೇಕ್ಷಣಿಯ ಸ್ಥಳಗಳ ಇತಿಹಾಸ ಅರಿಯಬೇಕು. ಇದರಿಂದ ಜ್ಞಾನ ಬಲವರ್ಧನೆಗೊಳ್ಳುತ್ತದೆ. ಗುರುವಾರದಿಂದ ಪ್ರಾರಂಭವಾಗಿರುವ ಶೈಕ್ಷಣಿಕ ಪ್ರವಾಸಕ್ಕೆ ಒಟ್ಟು 150 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಿದ್ದಾರೆ. ಮೂಡಲಗಿ ಶೈಕ್ಷಣಿಕ ವಲಯದ ಎಲ್ಲ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಶುಕ್ರವಾರ ಶಿರಸಿಯಿಂದ ಜೋಗ ಫಾಲ್ಸ್‌, ಇಡಗುಂಜಿ, ಮುರ್ಡೇಶ್ವರ, ಕೊಲ್ಲೂರ, ಉಡುಪಿ, ಶನಿವಾರ ಉಡುಪಿಯಿಂದ ಮಣಿಪಾಲ, ಕಾರ್ಕಳ, ಮೂಡಬಿದರೆ, ಧರ್ಮಸ್ಥಳ, ಭಾನುವಾರ ಧರ್ಮಸ್ಥಳದಿಂದ ಹೊರನಾಡು, ಶೃಂಗೇರಿ, ಶಿವಮೊಗ್ಗ ಹಾಗೂ ಸೋಮವಾರ ಶಿವಮೊಗ್ಗದಿಂದ ಶಿಗ್ಗಾಂವ, ಗೋಕಾಕ ಮಾರ್ಗವಾಗಿ ಮೂಡಲಗಿಗೆ ನಿರ್ಗಮಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವಂತ ಕಮತಿ, ಸುಧೀರ ಜೋಡಟ್ಟಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ದೈಹಿಕ ಶಿಕ್ಷಣಾಧಿಕಾರಿ ಎಸ್‌ ಎ. ನಾಡಗೌಡ, ಲಕ್ಕಪ್ಪ ಲೋಕುರಿ, ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.

loading...