ಕಾಂಗ್ರೆಸ್‌ ಸರ್ಕಾರಕ್ಕೆ ರೈತರೆಂದರೆ ಪ್ರೀತಿ: ಸಚಿವ ದೇಶಪಾಂಡೆ

0
31
loading...

ಹಳಿಯಾಳ: ರೈತ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರಗಳಿಂದ ಅನುಕೂಲವಾಗುತ್ತದೆ. ಹೀಗಾಗಿ ಹಲವರ ಪರಿಶ್ರಮದಿಂದ ರಚನೆಯಾದ ಸಹಕಾರಿ ಸಂಸ್ಥೆಗಳು ಉತ್ತರೋತ್ತರ ಅಭಿವೃದ್ಧಿ ಹೊಂದುವದು ಅವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.
ಹಳಿಯಾಳದ ರೈತರ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ರೈತರೆಂದರೆ ಪ್ರೀತಿ, ಕಾಳಜಿ ಹೀಗಾಗಿ ಸರ್ಕಾರ ರೈತರ ನೆರವಿಗೆ ಸದಾ ಧಾವಿಸಲಿರುತ್ತದೆ. ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ನಾನು ಸಹಕಾರಿ ಕ್ಷೇತ್ರದಲ್ಲಿ ಪ್ರತಿನಿಧಿಯಾಗಿದ್ದೆ ಆದರೆ ಶಾಸನಸಭೆಗೆ ಆಯ್ಕೆಯಾದ ನಂತರ ಸಹಕಾರಿ ಕ್ಷೇತ್ರವನ್ನು ಬಿಟ್ಟೆ. ಆದರೆ ಅಲ್ಲಿಯ ಸಂಬಂಧ ಮಾತ್ರ ಉಳಿಸಿಕೊಂಡಿದ್ದೆ. ಆದರೆ ಹಲವಾರು ಸಚಿವರು, ಶಾಸಕರು ಇನ್ನುವರೆಗೂ ಸಹಕಾರಿ ಕ್ಷೇತ್ರದಲ್ಲಿಯೂ ಸಹ ಇದ್ದಿರುವ ಗುಟ್ಟು ಗೊತ್ತಾಗುತ್ತಿಲ್ಲ. ಇಲ್ಲಿ ಯಾವ ಬೆಲ್ಲ ಇದೆಯೋ ಗೊತ್ತಾಗುತ್ತಿಲ್ಲ ಎಂದು ನುಡಿದರು.
ಕೆ.ಕೆ. ಹಳ್ಳಿ ನಿತ್ಯಾನಂದ ಮಠದ ಸುಬ್ರಹ್ಮಣ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸಂಘದ ಅಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ ಅಧ್ಯಕ್ಷತೆಯಲ್ಲಿ ಹಾಗೂ ಸಂಘದ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಅವರ ಉಪಸ್ಥಿತಿಯಲ್ಲಿ ಜರುಗಿದ ಸಮಾರಂಭದಲ್ಲಿ ಈ ವರೆಗೆ ಸಂಘದ ಅಧ್ಯಕ್ಷರಾಗಿ, ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಹಾಗೂ ಸಂಘದ ನಿರ್ದೇಶಕರು ಮೊದಲಾದವರು ವೇದಿಕೆಯಲ್ಲಿದ್ದರು.

loading...