ಕಾಮುಕರ ವಿರುದ್ಧ ಆಕ್ರೋಶ ಹೊರಹಾಕಿದ ಜನತೆ

0
18
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ವಿಜಯಪುರ ನಗರದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.

ವಿಜಯಪುರ ನಗರದ ವಿವಿಧ ಕಡೆಗಳಲ್ಲಿ ಸ್ವಯಂಪ್ರೇರಿತವಾಗಿ ಜನರು ರಸ್ತೆ ತಡೆ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಅತ್ಯಾಚಾರ ಎಸಗಿದ ಕೀಚಕರಿಗೆ ಶಿಕ್ಷೆ ವಿಧಿಸುವಂತೆ ಒಕ್ಕೂರಿಲಿನಿಂದ ಒತ್ತಾಯಿಸಿದರು.
ವಿಜಯಪುರದ ಮನಗೂಳಿ ರಸ್ತೆಯಲ್ಲಿನ ಬಡಾವಣೆಯ ಜನರು ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಹಳೆಯ ಕಟ್ಟಿಗೆ, ಟೈರ್‌ಗಳನ್ನು ಸಂಗ್ರಹಿಸಿ ರಸ್ತೆ ತಡೆ ನಡೆಸಿದರು. ಬಸ್‌ ನಿಲ್ದಾಣದಿಂದ-ಬಸವೇಶ್ವರ ವೃತ್ತಕ್ಕೆ ಹೋಗುವ ಮಾರ್ಗಮಧ್ಯದಲ್ಲಿರುವ ಅಂಗಡಿಕಾರರು ಸಹ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದ ಪ್ರಮುಖ ರಸ್ತೆಗಳಾದ ಕೇಂದ್ರ ಬಸ್‌ ನಿಲ್ದಾಣ, ಶಿವಾಜಿ ವೃತ್ತ, ನಗರದ ಹೃದಯ ಭಾಗ ಗಾಂಧಿ ವೃತ್ತ, ಡಾ.ಅಂಬೇಡ್ಕರ ವೃತ್ತ ಸೇರಿದಂತೆ ವಿಜಯಪುರದ ಹೊರವಲಯಗಳಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿತ್ತು. ಯುವಕರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಘಟನೆಯನ್ನು ಖಂಡಿಸಿ ದರ್ಗಾ ಪ್ರದೇಶದಲ್ಲಿಯೂ ಸಹ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಬಡಾವಣೆಯ ಎಲ್ಲ ನಿವಾಸಿಗಳು ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿದರು. ಅಲ್ಲಿನ ಯುವಕರು ಸಾವಿರಾರು ಬೈಕ್‌ಗಳ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿದರು. ಸಾವಿರಾರು ಯುವಕರು ಕೈಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ನೆರೆಯ ರಾಜ್ಯಗಳಿಂದಲೂ ಜನರು ಆಗಮಿಸಿದ್ದರು. ಸೊಲ್ಲಾಪುರ, ಕೊಲ್ಲಾಪುರದಿಂದಲೂ ಜನರು ಆಗಮಿಸಿದರು. ನೆರೆಯ ಜಿಲ್ಲೆಗಳಾದ ಯಾದಗೀರ, ಕಲಬುರ್ಗಿ, ರಾಯಚೂರ, ಬೀದರ್‌ ಸೇರಿದಂತೆ ಹತ್ತಾರು ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಕೀಚಕರ ಪ್ರತಿಕೃತಿ ದಹನ:
ವಿಜಯಪುರ ನಗರದ ದಲಿತ, ಪ್ರಗತಿಪರ, ಮಹಿಳಾಪರ, ರೈತಪರ, ಕನ್ನಡಪರ ಅಸಂಖ್ಯಾತ ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸಿ ಪ್ರತಿಭಟನಾ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದವು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆಮಾಡಿದ ಕೀಚಕರ ಪ್ರತಿಕೃತಿಗಳನ್ನು ಒದೆಯುತ್ತಾ, ಆಕ್ರೋಶ ಹೊರಹಾಕುತ್ತಾ ಸಾಗಿದರೆ, ಇನ್ನೊಂದು ಕಡೆ ಪ್ರತಿಕೃತಿಗಳನ್ನು ದಹಿಸುವ ಮೂಲಕ ಆಕ್ರೋಶ ಹೊರಹಾಕಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಚಂದ್ರಶೇಖರ ಕೊಡಬಾಗಿ, ಅಡಿವೆಪ್ಪ ಸಾಲಗಲ್ಲ, ವಿಶ್ವನಾಥ ಭಾವಿ, ರಮೇಶ ಆಸಂಗಿ, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ಸಿದ್ದು ರಾಯಣ್ಣವರ, ಅಶೋಕ ಚಲವಾದಿ, ಲಕ್ಷ್ಮೀ ದೇಸಾಯಿ, ಮಲ್ಲಮ್ಮ ಯಾಳವಾರ, ಡಾ.ಸುಜಾತಾ ಚಲವಾದಿ, ಶ್ರೀದೇವಿ ಉತ್ಲಾಸರ, ಎಂ.ಸಿ. ಮುಲ್ಲಾ, ಇರ್ಫಾನ್‌ ಶೇಖ ಪಾಲ್ಗೊಂಡಿದ್ದರು.

loading...