ಕಾಲುವೆಯ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದೆ: ಯಡಿಯೂರಪ್ಪ ಆರೋಪ

0
8
loading...

ಕನ್ನಡಮ್ಮ ಸುದ್ದಿ-ಆಲಮಟ್ಟಿ:-ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಲುವೆಯ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು, ರೈತರ ಭೂಸ್ವಾಧೀನ ಸಮಸ್ಯೆ ಬಗೆಹರಿಸಿಲ್ಲ ಎಂದು ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.
ಆಲಮಟ್ಟಿಯಲ್ಲಿ ಗುರುವಾರ ಬೆಳಿಗ್ಗೆ ಆಲಮಟ್ಟಿ ಜಲಾಶಯ ವೀಕ್ಷಣೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಈ ಭಾಗದ ರೈತರ ಬಹು ದೊಡ್ಡ ಸಮಸ್ಯೆ ಭೂಸ್ವಾಧೀನ ಸಮಸ್ಯೆಯಾಗಿದ್ದು, ಕಾಲುವೆ ಸೇರಿದಂತೆ ಇನ್ನೀತರ ಪ್ರಕ್ರಿಯೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಕಳೆದ ನಾಲ್ಕು ವರ್ಷದಿಂದಲೂ ಪರಿಹಾರ ನೀಡಿಲ್ಲ ಎಂದು ಅವರು ಆರೋಪಿಸಿದರು. “ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ” ಎಂಬ ಪಾದಯಾತ್ರೆ ನಡೆಸಿ ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರ ಈ ಭಾಗದ ಜನತೆಗೆ ಯಾವುದೇ ಹೊಸ ನೀರಾವರಿ ಯೋಜನೆಯನ್ನು ನೀಡಿಲ್ಲ, ನೀರು ಹರಿಸಿಲ್ಲ ಎಂದು ಆರೋಪಿಸಿದರು.ಮಹಾದಾಯಿ ನದಿ ಯೋಜನೆಯ ಸಲುವಾಗಿ 15 ದಿನದೊಳಗೆ ಗೋವಾ ಸರ್ಕಾರದ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿ ಅದರ ಇತ್ಯರ್ಥ್ಯಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಸೇರಿ, ರಾಜ್ಯದ ಹಲವು ಶಾಸಕರು ಬಿಜೆಪಿ ಸೇರಲು ಚರ್ಚೆ ನಡೆಸಿದ್ದಾರೆ, ಸೂಕ್ತ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರ ಸೇರ್ಪಡೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮೋಹನ ಲಿಂಬಿಕಾಯಿ, ಎಸ್‌.ಕೆ. ಬೆಳ್ಳುಬ್ಬಿ, ಸಂಗರಾಜ ದೇಸಾಯಿ, ಹನುಮಂತ ನಿರಾಣಿ, ಎನ್‌. ರವಿಕುಮಾರ, ಸಂತೋಷಕುಮಾರ, ಶಿವಾನಂದ ಅವಟಿ, ಅಶ್ವಿನಿ ಪಟ್ಟಣಶೆಟ್ಟಿ, ವಿಶ್ವಕರ್ಮ ಮುಖಂಡ ಕೆ.ಪಿ. ನಂಜುಂಡಿ, ಅಶೋಕ ಅಲ್ಲಾಪುರ ಮೊದಲಾದವರು ಇದ್ದರು.

loading...