ಡಿ.28 ರಿಂದು ಗಾಳಿಪಟ ಉತ್ಸವ

0
29
loading...

ಕನ್ನಡಮ್ಮ ಸುದ್ದಿ-ಕಾರವಾರ: ಜಿಲ್ಲೆಯ ಪ್ರವಾಸಿತಾಣಗಳನ್ನು ಪರಿಚಯಿಸುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಜಿಲ್ಲೆಯ ಎರಡು ಕಡಲತೀರಗಳಲ್ಲಿ ಡಿ.28 ಮತ್ತು 29ರಂದು ‘ಗಾಳಿಪಟ ಉತ್ಸವ’ ಆಯೋಜಿಸಿದ್ದು, ಬಾನಂಗಳಲ್ಲಿ ಹಾರಾಡುವ ಬಣ್ಣ ಬಣ್ಣದ ಕಾಗದದ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗತ್ವದಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಲು ಸಾಲು ಉತ್ಸವಗಳ ಮೂಲಕ ಪ್ರವಾಸಿಗರ ಹಾಗೂ ಸ್ಥಳೀಯರ ಗಮನ ಸೇಳೆದಿರುವ ಜಿಲ್ಲಾಡಳಿತ ಇದೀಗ ಮತ್ತೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಗುಜರಾತ್‌, ಬೆಂಗಳೂರು, ಮಂಗಳೂರು, ಮಲ್ಪೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಆಯೋಜಿಸುತ್ತಿರುವ ಗಾಳಿಪಟ ಉತ್ಸವಗಳು ಆ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯ ಮುಖ್ಯ ಕಡಲತೀರಗಳಲ್ಲಿ ಗಾಳಿಪಟ ಉತ್ಸವಗಳನ್ನು ಆಯೋಜಿಸಿ ಆ ಮೂಲಕ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರು ಹಾಗೂ ಕಲಾವಿದರನ್ನು ಆಕರ್ಷಿಸಲು ಸಿದ್ದತೆ ನಡೆಸಲಾಗಿದೆ.
ಡಿ. 28 ರಂದು ಮೊದಲ ದಿನ ಗೋಕರ್ಣ ಕಡಲತೀರದಲ್ಲಿ ಹಾಗೂ ಡಿ.29 ರಂದು ಕಾರವಾರ ಕಡಲತೀರದಲ್ಲಿ ಉತ್ಸವ ನಡೆಯಲಿದೆ. ಎರಡು ದಿನವೂ ಸಂಜೆ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉತ್ಸವ ಕಡಲತೀರಗಳಲ್ಲಿ ನಡೆಯಲಿದೆ. ಜಿಲ್ಲೆಯ ಕಲೆ, ಸಂಸ್ಕೃತಿ, ಪರಂಪರೆ ಪರಿಚಯಿಸುವ ಗಾಳಿಪಟ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದ್ದು, ಯಕ್ಷಗಾನ, ಪೃಕೃತಿ ಸೊಬಗು, ವಿವಿಧ ಪ್ರಾಣಿ-ಪಕ್ಷಿಗಳ ಅದ್ಬುತ ಕಲಾಕೃತಿಗಳನ್ನೊಳಗೊಂಡ ಬಾನಾಡಿಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ ಹೀಗೆ ಕಡಲತಡಿಯಲ್ಲಿ ನಡೆಯುವ ಬಣ್ಣ ಬಣ್ಣದ ಬಾನಾಡಿಗಳ ಕಲರವದ ಸೊಬಗು ನೋಡಲು ಪ್ರವಾಸಿಗರು ಸೇರಿದಂತೆ ಸ್ಥಳೀಯರಿಗೆ ಲಭ್ಯವಾಗಲಿದೆ.
ಗಾಳಿಪಟ ಹಾರಿಸುವ ಆಸಕ್ತರಿಗೆ ತರಬೇತಿ;ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯದ 3 ತಂಡಗಳು ನೋಂದಣಿ ಮಾಡಿಕೊಂಡಿವೆ. 5 ಅಂತರಾಷ್ಟ್ರೀಯ ಮಟ್ಟದ ಕಲಾವಿದರು, 15 ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ. ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಸಾಮಾನ್ಯ ಜನರು ಪ್ರವಾಸಿಗರು ಗಾಳಿ ಪಟ ಉತ್ಸವದಲ್ಲಿ ಭಾಗವಹಿಸಿ ತಾವು ಸಿದ್ದಪಡಿಸಿದ ಗಾಳಿಪಟಗಳನ್ನು ಹಾರಿಸಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.

loading...