ಮುಂಡಗೋಡ ಬಂದ್‌ ಕರೆಗೆ ಸಂಪೂರ್ಣ ಯಶಸ್ವಿ

0
31
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಜಿಲ್ಲೆಯ ಹೊನ್ನಾವರದ ಪರೇಶ ಮೇಸ್ತಾ ಹತ್ಯೆ ಖಂಡಿಸಿ ವಿವಿಧ ಹಿಂದು ಪರ ಸಂಘಟನೆಗಳು ಮಂಗಳವಾರ ನೀಡಿದ್ದ ಮುಂಡಗೋಡ ಬಂದ್‌ ಕರೆ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಿಗ್ಗೆಯಿಂದಲೇ ನಗರದ ಅಂಗಡಿ ಮುಗ್ಗಟ್ಟುಗಳು ಬಂದ್‌ ಆಗಿದ್ದವು, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಜನಜೀವನ ಅಸ್ಥವ್ಯಸ್ಥಗೊಂಡಿತ್ತು. ಮುಂಡಗೋಡ ಬಂದ್‌ ವಿಷಯ ತಿಳಿಯದೆ ಕಾರ್ಯನಿಮಿತ್ತ ಬಂದವರ ಪಾಡು ಆ ದೇವರಿಗೆ ಪ್ರೀತಿ. ಬಸ್‌, ಟೆಂಪೋ ಸೇರಿದಂತೆ ಯಾವುದೇ ರೀತಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಬಂದವರು ಸಂಜೆವರೆಗೆ ಇಲ್ಲಿಯ ಬಸ್‌ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡ ಬಸ್‌ ಸಂಚಾರವಿಲ್ಲದೇ ತಮ್ಮ ಊರಿಗೆ ಹೋಗಲಾಗದೆ ಇಲ್ಲಿಯೇ ಉಪವಾಸ ವನವಾಸ ಉಳಿಯಬೇಕಾಯಿತು. ಬ್ಯಾಂಕ್‌, ಸರಕಾರಿ ಕಛೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಗ್ರಾಹಕರಿಲ್ಲದೇ ಖಾಲಿ ಖಾಲಿಯಾಗಿದ್ದವು.
ಮಧ್ಯ ಸುರಿದು ಪ್ರತಿಭಟನೆ: ಇಲ್ಲಿಯ ಪ್ರವಾಸಿ ಮಂದಿರದಿಂದ ಮೌನ ಮೆರವಣಿಗೆ ಹೊರಟ ಹಿಂದು ಪರ ಸಂಘಟನೆ ಕಾರ್ಯಕರ್ತರು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿದರು. ಇದೇ ಸಂದರ್ಭದಲ್ಲಿ ನಿಗೂಡ ಸ್ಥಳದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಮಧ್ಯದ ಪೌಚಗಳನ್ನು ಹಿಡಿದು ತಂದು ಶಿವಾಜಿ ವೃತದಲ್ಲಿ ಬೆಂಕಿಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಪರೇಶ ಮೇಸ್ತಾ ಎನ್ನುವ ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಕಳೆದ 5 ದಿನಗಳ ಹಿಂದೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಕ್ರೂರತೆಯು ಇಡೀ ಮನುಕುಲವನ್ನೇ ಚಿಂತೆಗೀಡು ಮಾಡಿದೆ. ರಾಜ್ಯದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಪರೇಶ ಮೇಸ್ತಾ ಹತ್ಯೆಯ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದರು.
ಶ್ರದ್ದಾಂಜಲಿ: ಪಟ್ಟಣದ ಶ್ರೀರಾಮ ಸೇನೆ ವತಿಯಿಂದ ಮಂಗಳವಾರ ಇಲ್ಲಿಯ ಶಿವಾಜಿ ಸರ್ಕಲ್‌ ನಲ್ಲಿ ಮೃತ ಪರೇಶ ಮೇಸ್ತಾ ಅವರ ಭಾವಚಿತ್ರಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಮತ್ತೆ ಹುಟ್ಟಿ ಬರುವಂತೆ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಮಂಜುನಾಥ ಹರಿಜನ, ಮಲ್ಲಿಕಾರ್ಜುನ ಗೌಳಿ, ಅರುಣ ಬಜಂತ್ರಿ, ಎಲ್‌.ಟಿ.ಪಾಟೀಲ, ಮಂಜುನಾಥ ಶೇಟ್‌, ಗಿರೀಶ ಓಣಿಕೇರಿ, ಗುಡ್ಡಪ್ಪ ಕಾತೂರ, ಬಾಪುಗೌಡ ಪಾಟೀಲ, ಬಿ.ಕೆ ಪ್ರಕಾಶ, ಕಿರಣ ತಳವಾರ, ಮುಂತಾದವರು ಉಪಸ್ಥಿತರಿದ್ದರು.

loading...