ಮೇಸ್ತಾ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವಂತೆ ಧರಣಿ

0
15
loading...

ಕನ್ನಡಮ್ಮ ಸುದ್ದಿ-ಕಾರವಾರ: ಹೊನ್ನಾವರದಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಪರೇಶ್‌ ಮೇಸ್ತಾ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ವಿತರಿಸಬೇಕು ಹಾಗೂ ಜಿಲ್ಲೆಯಲ್ಲಿ ನಡೆದ ಗಲಬೆ ಪ್ರಕರಣದಲ್ಲಿ ಬಂಧಿತರಾದ ಅಮಾಯಕರ ಮೇಲಿನ ಪ್ರಕರಣ ಕೈ ಬಿಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು.
ಕಾಂಗ್ರೆಸ್‌ ಸರ್ಕಾರ ಹಿಂದೂಗಳ ವಿರೋಧಿಯಾಗಿದೆ. ಪರೇಶ್‌ ಮೇಸ್ತ ಕುಟುಂಬಕ್ಕೆ ಸರ್ಕಾರದಿಂದ ಈವರೆಗೂ ಸೂಕ್ತ ಪರಿಹಾರ ನೀಡಿಲ್ಲ. ನ್ಯಾಯಕ್ಕಾಗಿ ಹೋರಾಟ ನಡೆಸಿದ ಹಿಂದೂ ಕಾರ್ಯಕರ್ತರನ್ನು ಹಾಗೂ ಅಮಾಯಕರನ್ನು ವಿವಿಧ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯಬಾರ ನಡೆಸುತ್ತಿರುವ ಸರ್ಕಾರ ಅಲ್ಪಸಂಖ್ಯಾತರನ್ನು ಒಲೈಸಲು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿ ಭಾಷಣ ಮಾಡಿದ ಕಡೆಗಳೆಲ್ಲ ಗಲಭೆ ಸೃಷ್ಟಿಯಾಗುತ್ತಿದ್ದು, ಶಾಂತಿಯುತವಾದ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮುಖ್ಯಮಂತ್ರಿಗಳೇ ಗಲಭೆ ಮಾಡಿಸಿದ್ದಾರೆ. ಈ ಗಲಭೆಯಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಪರೇಶ್‌ ಮೇಸ್ತ ಕುಟುಂಬಕ್ಕೆ ಸರ್ಕಾರ ಯಾವದೇ ಸಹಾಯ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪರೇಶ್‌ ಮೇಸ್ತ ಕುಟುಂಬದವರಿಗೆ ವಯಕ್ತಿಕ ಪರಿಹಾರ ನೀಡುವ ನಾಟಕವಾಡುತ್ತಿದ್ದಾರೆ. ಸಚಿವರು ನೀಡಿದ ವಯಕ್ತಿಕ ಪರಿಹಾರ ಹಣವನ್ನು ಆ ಕುಟುಂಬದವರು ತಿರಸ್ಕರಿಸಿದ್ದು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ಇನ್ನು ಗಲಬೆಯಲ್ಲಿ ಅನೇಕ ಅಮಾಯಕರನ್ನು ಬಂಧಿಸಲಾಗಿದೆ. ಆಸ್ಪತ್ರೆಗೆ ತೆರಳುತ್ತಿದ್ದವರನ್ನು, ವ್ಯಾಪಾರಕ್ಕಾಗಿ ಹೊರ ಬಂದವರನ್ನು, ಪಾದಚಾರಿಗಳನ್ನು ಕೂಡ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಅಮಾಯಕರ ಮೇಲೆ ದಾಖಲಾದ ಪ್ರಕರಣಗಳನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪ್ರಮುಖರಾದ ನಾಗರಾಜ ಜೋಶಿ, ಮನೋಜ ಭಟ್ಟ, ರೂಪಾಲಿ ನಾಯ್ಕ, ನಿತಿನ್‌ ರಾಯ್ಕರ್‌, ರಾಜೇಶ ನಾಯಕ ಇತರರು ಪ್ರತಿಭಟನೆಯಲ್ಲಿ ಇದ್ದರು.

loading...