ಯೋಜನೆಗಳ ಸದ್ಬಳಕ್ಕೆಯಿಂದ ಗ್ರಾಮಾಭಿವೃದ್ಧಿ -ಬಾಲಚಂದ್ರ ಜಾರಕಿಹೊಳಿ

0
28
loading...

ಕನ್ನಡಮ್ಮ ಸುದ್ದಿ-17

ಘಟಪ್ರಭಾ : ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡಿರುವ ಹುಣಶ್ಯಾಳ ಪಿ.ಜಿ ಗ್ರಾಮ ಪಂಚಾಯತಿಯು ಇತರೇ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸಿಸಿದರು.
ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಭಾನುವಾರದಂದು 64 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿಯ ಗ್ರಾಮ ಪಂಚಾಯತಿ ಸದಸ್ಯರು ಎಲ್ಲರೂ ಒಗ್ಗೂಡಿ ಸರ್ಕಾರದ ಕಾಮಗಾರಿಗಳನ್ನು ಸ್ವತಃ ಮುಂದೆ ನಿಂತು ಅನುಷ್ಠಾನ ಮಾಡುತ್ತಿರುವುದರಿಂದ ಗುಣಮಟ್ಟದ ಕೆಲಸ ನಡೆದಿದೆ. ಗ್ರಾಮದ ಪ್ರಗತಿಪರ ಕಾರ್ಯಗಳು ನಮ್ಮ ಕ್ಷೇತ್ರದಲ್ಲಿಯೇ ಮಾದರಿಯಾಗಿದೆ.
ಇತರೇ ಗ್ರಾಮಗಳು ಈ ಪಂಚಾಯತಿಯ ಕಾಮಗಾರಿಗಳನ್ನು ನೋಡಿ ಕಲಿಯಬೇಕಾಗಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಹುಣಶ್ಯಾಳ ಪಿ.ಜಿ ಗ್ರಾಮಸ್ಥರ ಬೇಡಿಕೆಗಳಿಗೆ ಹಂತ ಹಂತವಾಗಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಲೇಜು, ಪಶು ವೈದ್ಯಾಲಯ ಹಾಗೂ ಸರ್ಕಾರಿ ಆಸ್ಪತ್ರೆ ಸೇರಿದಂತೆ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಗ್ರಾಮಾಭಿವೃದ್ಧಿಗೆ ಯುವಕರು ಟೊಂಕಕಟ್ಟಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆಯೂ ಅವರು ಕರೆ ನೀಡಿದರು.
ಸ್ಥಳೀಯ ನಿಜಗುಣ ದೇವರು ಸಾನಿಧ್ಯವಹಿಸಿ ಮಾತನಾಡುತ್ತ, ಬಾಲಚಂದ್ರ ಜಾರಕಿಹೊಳಿ ಅವರು ಕಾಮಧೇನು-ಕಲ್ಪವೃಕ್ಷವಿದ್ದಂತೆ. ಇಂತಹ ಶಾಸಕರನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ಮತದಾರರ ಭಾಗ್ಯ. ಗೋಕಾವಿ ನಾಡು ಕಂಡ ಅಪರೂಪದ ವ್ಯಕ್ತಿ. ಎಲ್ಲ ಮಠಾಧೀಶರ, ಮತದಾರರ ಪ್ರೀತಿ-ಒಲವುನ್ನು ಗಳಿಸಿಕೊಂಡಿರುವ ಇವರು ಸೋಲಿಲ್ಲದ ಸರದಾರರಾಗಿದ್ದಾರೆ ಎಂದು ಶಾಸಕರ ಜನಪ್ರೀಯ ಕಾರ್ಯಗಳನ್ನು ಶ್ಲಾಘಿಸಿದರು.
ಗ್ರಾಪಂ ಅಧ್ಯಕ್ಷೆ ಯಮನವ್ವ ನಾಯಿಕ, ಉಪಾಧ್ಯಕ್ಷ ಜಗದೀಶ ಹುಕ್ಕೇರಿ, ಅವ್ವಣ್ಣಾ ಡಬ್ಬನವರ, ತಾಪಂ ಸದಸ್ಯರಾದ ಬಸವರಾಜ ಹುಕ್ಕೇರಿ, ಗೋಪಾಲ ಕುದರಿ, ಪುಂಡಲೀಕ ಸುಂಕದ, ನಿಜಾಮಸಾಬ ಜಮಾದಾರ, ಮುತ್ತೆಪ್ಪ ಕುಳ್ಳೂರ, ಬಾಳಪ್ಪ ನೇಸರಗಿ, ಚನಗೌಡ ಪಾಟೀಲ, ಶಿವನಗೌಡ ಪಾಟೀಲ, ಎಚ್‌.ಡಿ. ಮುಲ್ಲಾ, ಗುರುನಾಥ ಅಥಣಿ, ಬಾಳಪ್ಪ ಕಟಕಟಿ, ಶಬ್ಬೀರ ತಾಂಬಿಟಗಾರ, ಬಸು ಕಾಡಾಪೂರ, ನಿಜಾಮ ನದಾಫ, ಕಲಗೌಡ ಪಾಟೀಲ, ಬಸವಂತ ಕಮತಿ, ಹನಮಂತ ತೇರದಾಳ, ಶಂಕರ ಇಂಚಲ, ಮಲೀಕ ಹುಣಶ್ಯಾಳ, ಮಹಾದೇವ ದಂಡಿನವರ, ಬಸಲಿಂಗ ಕೆಳಗಡೆ, ಶಂಕರಯ್ಯ ಗುಡಿ, ಅಜೀತ ಪಾಟೀಲ ಸೇರಿದಂತೆ ಅನೇಕರು ಇದ್ದರು.

loading...