ವಸತಿ ನಿರ್ಮಾಣಕ್ಕೆ ಸಾಲ ಸೌಲಭ್ಯ ಕಟ್ಟಡ ನಿರ್ಮಾಣ ರಂಗದ ಉತ್ತೇಜನ

0
27
loading...

ಧಾರವಾಡ- ಗೃಹ ಸಾಲದ ಮಂಜೂರಾತಿಯಲ್ಲಿನ ವಿಳಂಬವನ್ನು ತಪ್ಪಿಸಲು ಬ್ಯಾಂಕಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ ಸದ್ಯವೇ ಕಾರ್ಯಾರಂಭಿಸಲಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಅಧ್ಯಕ್ಷ ಎಸ್ ರವೀಂದ್ರನ್ ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣಗಾರರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತ್ವರಿತ ಗತಿಯಲ್ಲಿ ಸಾಲದ ವಿಲೇವಾರಿ, ಬಡ್ಡಿದರದಲ್ಲಿ ಕಡಿತ, 50 ಲಕ್ಷ ರೂ. ಮೇಲ್ಪಟ್ಟ ಗೃಹ ಸಾಲ ಯೋಜನೆಗಳಿಗೆ ಬಡ್ಡಿ ದರದಲ್ಲಿ ಸ್ಪರ್ಧಾತ್ಮಕ ಪರಿಷ್ಕರಣೆಗೆ ಅವಕಾಶ, ಮರುಪಾವತಿಗೆ 30 ವರ್ಷಗಳ ಸುಧೀರ್ಘ ಕಾಲಾವಕಾಶ, ಮನೆ ದುರಸ್ತಿ ಹಾಗೂ ನವೀಕರಣಕ್ಕೂ ಸಾಲ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗೃಹ ನಿರ್ಮಾಣಕ್ಕೆ ಸಾಲ, ಕೃಷಿಯೇತರ ಜಾಗ ಖರೀದಿ ಹಾಗೂ ಅದರಲ್ಲಿ ವಸತಿ ನಿರ್ಮಾಣಕ್ಕೆ ಸಾಲ ಸೌಲಭ್ಯ ಇವು ಕಟ್ಟಡ ನಿರ್ಮಾಣ ರಂಗದ ಉತ್ತೇಜನಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಕೈಗೊಂಡ ಕ್ರಮಗಳಾಗಿವೆ. ವಾಣಿಜ್ಯ ಸಂಕೀರ್ಣಕ್ಕೂ ಬ್ಯಾಂಕು ಸಾಲ ಸೌಲಭ್ಯ ಒದಗಿಸಲಿದ್ದು ಬಾಡಿಗೆ ಒಪ್ಪಂದದ ಮೇಲೆ ಬ್ಯಾಂಕು ಸಾಲ ಸೌಲಭ್ಯ ವಿಸ್ತರಿಸುತ್ತಿದೆ ವಾಣಿಜ್ಯ ಮತ್ತು ವಾಣಿಜ್ಯೇತರ ಬಾಡಿಗೆ ಕರಾರಿಗೂ ಈ ಯೋಜನೆ ಅನ್ವಯಿಸುತ್ತದೆ ಎಂದರು.
ರಿಯಲ್ ಎಸ್ಟೇಟ್ ಡೆವಲಪರ್ ಅಸೋಸಿಯೇಶನ್ ಅಧ್ಯಕ್ಷ ಪ್ರದೀಪ ರಾಯ್ಕರ್ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಡೆ ವಿಶೇಷವಾಗಿ ಸಮಗ್ರ ಉತ್ತರ ಕರ್ನಾಟಕದಲ್ಲಿನ ಕಟ್ಟಡ ನಿರ್ಮಾಣ ರಂಗಕ್ಕೆ ಹೊಸ ಆಯಾಮ ನೀಡಲಿದೆ ಎಂದರು.
ಬ್ಯಾಂಕಿನ ಮಹಾ ಪ್ರಬಂಧಕರಾದ ಎಸ್ ಎಮ್ ಗೋರಬಾಳ, ಕುಮಾರ ಗೌಡ ಉಪಸ್ಥಿತರಿದ್ದರು. ಬ್ಯಾಂಕಿನ ಮುಖ್ಯ ಪ್ರಬಂಧಕ ಉಮೇಶ ಬಾನಿ ಮತ್ತು ರಮೇಶ ತುಂಗಾ ವಿಶೇಷ ಸಾಲ ಮತ್ತು ಠೇವಣಿ ಮಾಹಿತಿ ನೀಡಿದರು. ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಬಸವರಾಜ ಹೋಳ್ಕರ್ ಸ್ವಾಗತಿಸಿದರು. ಬ್ಯಾಂಕಿನ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ನಿರೂಪಿಸಿದರು. ಮುಖ್ಯ ಪ್ರಬಂಧಕ ರಮಾನಂದ ನಾಯ್ಕ ವಂದಿಸಿದರು.

loading...