ಸಂಕಲ್ಪ ಜಾತ್ರೆಗೆ ಆಹ್ವಾನ : ಪ್ರಧಾನಿ ಮೋದಿ ಸಮ್ಮತಿ

0
40
loading...

ಮುಗಳಖೋಡ 21: ಬೆಳಗಾವಿ ಜಿಲ್ಲೆಯ ಮುಗಳಖೋಡದಲ್ಲಿ 2018 ರ ಜನವರಿಯಲ್ಲಿ ನಡೆಯಲಿರುವ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಸಮ್ಮತಿ ನೀಡಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಪೀಠಾಧಿಪತಿಗಳಾದ ಡಾ.ಮುರಘರಾಜೇಂಧ್ರ ಶ್ರೀಗಳು ನೀಡಿದ ಅಹ್ವಾನವನ್ನು ಪ್ರಧಾನಿ ಸ್ವೀಕರಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿದ್ದಾರೆ. ಮುಗಳಖೋಡದ ಮಠದ ಇತಿಹಾಸ, ಬೆಳೆದು ಬಂದ ಬಗೆ, ಪೀಠಾಧಿಪತಿಗಳು, ಭಕ್ತ ಸಂಕುಲದ ಬಗ್ಗೆ ವಿವರವಾಗಿರುವ ಕಿರುಹೊತ್ತಿಗೆ, ಪುಸ್ತಕಗಳನ್ನು ಶ್ರೀಗಳು ಪ್ರಧಾನಿಗೆ ಸಲ್ಲಿಸಿದರು. ಇದನ್ನು ಓದಿ ಸಂತೃಪ್ತರಾಗಿ ಮಠದ ಸಾಮಾಜಿಕ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಂಸದ ಸುರೇಶ ಅಂಗಡಿ ಮಠದ ಪರಂಪರೆಯನ್ನು ಪ್ರಧಾನಿಗೆ ವಿವರಿಸಿದರು. ಹುಕ್ಕೇರಿಯ ಶ್ರೀಗಳು, ಸಂಸದ ಭಗವಂತ ಖೂಬಾ, ಶಾಸಕ ಪಿ.ರಾಜೀವ, ಅನಿಲ್ ದಳವಾಯಿ, ಮುಂತಾದವರು ಇದ್ದರು.

ಶಿವಯೋಗಿ ಸಿದ್ದರಾಮೇಶ್ದವರ ಸಂಕಲ್ಪ ಜಾತ್ರೆ ಜನವರಿ 12 ರಿಂದ 14 ರವರೆಗೆ ಮುಗಳಖೋಡದಲ್ಲಿ ನಡೆಯಲಿದೆ. ಸಹಸ್ರಾರು ಸ್ವಾಮೀಜಿಗಳು, ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಒಂದೇ ವೇದಿಕೆಯಲ್ಲಿ 10000 ಕ್ಕೂ ಹೆಚ್ಚು ಸ್ವಾಮಿ ವಿವೇಕಾನಂದರ ಗಣವೇಶಧಾರಿಗಳಿಂದ ಸಂದೇಶ ಸಾರುವ ವಿಶ್ವದಾಖಲೆಯ ಶೋಭಾ ಯಾತ್ರೆ ಕೂಡ ನಡೆಯಲಿದೆ.
ಮಠದಲ್ಲಿ 770 ಗುರು ಜಂಗಮರ ಪಾದಪೂಜೆ, ಮಹಾಮಂಟಪದ ಪೂಜಾ ಕಾರ್ಯಕ್ರಮ, ಅನುಭವ ಮಂಟಪದ ಉದ್ಘಾಟನೆ ಹಾಗೂ ಸರ್ವದರ್ಮ ಸಮ್ಮೇಳನ ಜರುಗಲಿದೆ. ಸಿ.ಎಂ.ಸಿದ್ಧರಾಮಯ್ಯ, ಆರ್ಟ ಆಫ ಲಿವಿಂಗ್‍ನ ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ, ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಗೋವಾ ಸಿ.ಎಂ. ಮನೋಹರ ಪರಿಕ್ಕರ್ ಸೇರಿದಂತೆ ಕೇಂದ್ರ ಸಚಿವರು, ರಾಜ್ಯದ ಸಚಿವರು, ಪಾಲ್ಗೊಳ್ಳಲಿದ್ದಾರೆ. ಶ್ರೀಮಠದಲ್ಲಿ ನೂರಾರು ಎಕರೆಯಲ್ಲಿ ಬೃಹತ್ತ ವೇದಿಕೆಯು ರೂಪಸಲಾಗುತ್ತಿದೆ ಎಂದು ಡಾ. ಮುರಘರಾಜೇಂದ್ರ ಶ್ರೀಗಳು ತಿಳಿಸಿದರು.

loading...