ಸಂಗೊಳ್ಳಿ ರಾಯಣ್ಣನ ಉತ್ಸವ ಪೂರ್ವಭಾವಿ ಸಭೆ

0
24
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ 30ಲಕ್ಷ ರೂ. ಬಿಡುಗಡೆಯಾಗಿದ್ದು ಅದ್ಧೂರಿಯಿಂದ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಹೇಳಿದರು.
ಅವರು ತಾಲೂಕಿನ ಸಂಗೊಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ರಾಯಣ್ಣನ ಉತ್ಸವದ ಪೂರ್ವಭಾವಿ ಸಭೆ ನೇತೃತ್ವ ವಹಿಸಿ ಮಾತನಾಡಿ, ವಿದ್ಯುತ್‌, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು. ಉತ್ಸವದಲ್ಲಿ ನಾನಾ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಜ.12ರಂದು ಜಾನಪದ ಕಲಾವಾಹಿನಿ ಮೆರವಣಿಗೆ ನಡೆಯಲಿದ್ದು, 30ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ ಎಂದರು. ನಾಡಿನ ಎಲ್ಲ ಗಣ್ಯರು, ಹಿರಿಯರು, ಮಕ್ಕಳು, ಮಹಿಳೆಯರು ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದರು. ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಬರೀ ಸರಕಾರ, ಅಧಿಕಾರಿಗಳು ಉತ್ಸವ ಮಾಡಿದರೆ ಸಾಲದು, ನಾಗರಿಕರು, ಸಾರ್ವಜನಿಕರು ಆಸಕ್ತಿಯಿಂದ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಆಗ ಉತ್ಸವ ಸಾರ್ಥಕವಾಗುತ್ತದೆಂದರು. ರಾಯಣ್ಣನ ಉದ್ಯಾನವನ, ಪ್ರಮುಖ ರಸ್ತೆಗಳನ್ನು ಸ್ವಚ್ಛತೆ ಮಾಡಲು ಬೆಂಬಲ ಸೂಚಿಸುವುದಾಗಿ ತಿಳಿಸಿದರು.
ಉತ್ಸವ ನಿಮಿತ್ತ ಯುವ ಸಮಾವೇಶ ಹಮ್ಮಿಕೊಳ್ಳಲಾಗುವುದು. ಬಿಇಒ ಅವರು ಡಿಗ್ರಿ ಕಾಲೇಜಿನ 500 ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕೆಂದರು. ಉತ್ಸವ ಮೋಜುಮಸ್ತಿಗೆ ಸೀಮಿತ ಆಗಿರದೆ ಯುವ ಜನತೆಯಲ್ಲಿ ಸ್ವಾಭಿಮಾನ, ದೇಶಾಭಿಮಾನದ ಕಿಚ್ಚು ಬೆಳೆಸುವ ಉದ್ದೇಶ ಹೊಂದಿರಬೇಕೆಂದರು. ಗ್ರಾಪಂ.ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಇತಿಹಾಸ ಸಂಶೋಧಕ ಬಸವರಾಜ ಕಮತ ಮಾತನಾಡಿ, ಪ್ರಸ್ತುತ ವರ್ಷ ನಡೆಯುವ ರಾಯಣ್ಣನ ಉತ್ಸವದಲ್ಲಿ ರಾಯಣ್ಣನ ಪ್ರಶಸ್ತಿ ನೀಡಬೇಕು. ಕಿತ್ತೂರಿನಲ್ಲಿ ಸ್ಥಾಪಿಸಿರುವ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪನ ಮೂರ್ತಿಯನ್ನು ಚನ್ನಮ್ಮನ ಆಶ್ವಾರೂರ್ಢ ಮೂರ್ತಿ ಅಕ್ಕ-ಪಕ್ಕದಲ್ಲಿ ಸ್ಥಾಪಿಸಿ, ಶೀಘ್ರ ಉದ್ಘಾಟನೆ ಮಾಡಬೇಕೆಂದು ಆಗ್ರಹಿಸಿದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ಉತ್ಸವ ಶಿಸ್ತುಬದ್ಧ, ಸುವ್ಯವಸ್ಥಿತವಾಗಿ ನಡೆಸುವ ಉದ್ಧೇಶದಿಂದ ಸಮಿತಿಗಳ ರಚನೆ ಮಾಡಲಾಯಿತು. ಎಸ್ಪಿ ಬಿ.ಆರ್‌.ರವಿಕಾಂತೇಗೌಡ, ಜಿಪಂ.ಸಿಇಒ ರಾಮಚಂದ್ರನ್‌, ಜಿಪಂ.ಸದಸ್ಯ ಅನಿಲ ಮ್ಯಾಕಲಮರ್ಡಿ, ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಪಂ.ಅಧ್ಯಕ್ಷೆ ಶೈಲಾ ಸಿದ್ರಾಮನಿ, ಗ್ರಾಪಂ.ಅಧ್ಯಕ್ಷೆ ಗಂಗವ್ವ ಹಳೇಮನಿ, ತಾಪಂ.ಸದಸ್ಯ ಗೌಸ್‌ಸಾಬ ಬುಡ್ಸೇಮುಲ್ಲಾ, ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ, ಕಿತ್ತೂರ ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ, ಸಿಪಿಐ ಸಂಗನಗೌಡರ, ಪಿಡಿಒ ಕಾವೇರಿ ಬಡಿಗೇರ, ಮಲ್ಲಿಕಾರ್ಜುನ ಕೊಡೊಳ್ಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ರಾಯಣ್ಣನ ಅಭಿಮಾನಿಗಳು ಉಪಸ್ಥಿತರಿದ್ದರು.

loading...