ಸಮಸ್ಯೆಗಳಿಗೆ ಎದೆಯೊಡ್ಡುವವನೇ ನೈಜ ನಾಯಕ: ನೀಲಮಣಿ

0
26
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಹೆದರುವವರು ಎಂದಿಗೂ ನಾಯಕರಾಗಲು ಸಾಧ್ಯವಿಲ್ಲ. ಸಮಸ್ಯೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಮುನ್ನುಗ್ಗುವ ಮೂಲಕ ಪರಿಹಾರ ಕಂಡುಕೊಳ್ಳುವುದು ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವರು ನೈಜ ನಾಯಕರಾಗಿರುತ್ತಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಹೇಳಿದರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಕತ್ವ ಗುಣವು ಮನುಷ್ಯನಿಗೆ ವಿವಿಧ ಹೊಸ ಅವಕಾಶಗಳನ್ನು ನೀಡುತ್ತದೆ. ಆದ್ದರಿಂದ ಎಲ್ಲರೂ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಪ್ರಾಮಾಣಿಕತೆ, ಸ್ಪಷ್ಟ ಗುರಿ, ಆತ್ಮವಿಶ್ವಾಸ ಇತ್ಯಾದಿ ಗುಣಗಳು ಉತ್ತಮ ನಾಯಕ ರೂಪುಗೊಳ್ಳುವುದಕ್ಕೆ ಅನುಕೂಲವಾಗುತ್ತವೆ ಎಂದರು.
ಸಮಾಜದಲ್ಲಿ ಮುಖ್ಯವಾಗಿ ನೈಸರ್ಗಿಕ ನಾಯಕತ್ವ, ಆಯ್ಕೆ ಮೂಲಕ ನಾಯಕತ್ವ, ಸಾಂದರ್ಭಿಕ ನಾಯಕತ್ವ ಎಂದು ಮೂರು ನಾಲ್ಕು ವಿಧವಾಗಿ ನಾಯಕತ್ವವನ್ನು ಕಾಣಬಹುದು. ಗಾಂಧೀಜಿ, ಅಂಬೇಡ್ಕರ, ಬಸವಣ್ಣ, ಸ್ವಾಮಿ ವಿವೇಕಾನಂದ, ಶಿವಾಜಿ ಸೇರಿದಂತೆ ಇತರೆ ಮಹಾತ್ಮರು ಇವರೆಲ್ಲರೂ ಹುಟ್ಟು ನಾಯಕರು. ಇವರುಗಳು ತಮ್ಮ ಸುತ್ತಮುತ್ತಲಿನ ಸಮಾಜದ ಪರಿಸ್ಥಿತಿಗಳನ್ನು ವಿರುದ್ಧ ಹೋರಾಡುತ್ತಾ ದೀನ ದಲಿತರ ಧ್ವನಿಯಾಗುವುದರ ಮೂಲಕ ಸಮಾಜದ ನೇತೃತ್ವ ವಹಿಸಿದ್ದರು ಎಂದು ತಿಳಿಸಿದರು.
ಎರಡನೇಯದಾಗಿ ವ್ಯವಸ್ಥೆಯು ಕೆಲವರಿಗೆ ನಾಯಕ ಎಂದು ಆಯ್ಕೆ ಮಾಡುತ್ತದೆ. ಸಂಸ್ಥೆ ಮತ್ತು ಪಕ್ಷಗಳಲ್ಲಿ ಕೆಲವರನ್ನು ಅಧ್ಯಕ್ಷ ಮತ್ತು ಕಾರ್ಯದರ್ಶಿ ಎಂದು ಆಯ್ಕೆ ಮಾಡುತ್ತಾರೆ. ಈ ಮೂಲಕ ಆ ವ್ಯಕ್ತಿಗಳು ಆ ಸಂಸ್ಥೆ ಮತ್ತು ಪಕ್ಷವನ್ನು ಮುನ್ನಡೆಸುತ್ತಾರೆ. ಇದನ್ನು ಆಯ್ಕೆ ಮೂಲಕ ನಾಯಕತ್ವ ಎನ್ನಬಹುದು. ಇನ್ನು ಮೂರನೇಯದು ಸಾಂದರ್ಭಿಕ ನಾಯಕತ್ವ, ಇಲ್ಲಿ ಕೆಲವರು ಕೆಲ ಸನ್ನಿವೇಶ ಮತ್ತು ಸಂದರ್ಭದ ಮುಖಾಂತರ ನಾಯಕರಾಗುತ್ತಾರೆ. ಇತ್ತೀಚಿನ ಆಧುನಿಕ ಯುಗದಲ್ಲಿ ಸಂಘಟಿತ ನಾಯಕತ್ವ ಎಂಬ ಹೊಸ ವಿಧವು ಕಾಣಬಹುದು. ಒಂದು ಹಡಗು ಮುಳುಗುವ ಸಂದರ್ಭದಲ್ಲಿ ಅದರ ರಕ್ಷಣೆಗೆ ಕೇವಲ ಹಡಗಿನ ಕ್ಯಾಪ್ಟನ್ ಹೋರಾಡಿದರೆ ಸಾಲದು. ಅದರ ಬದಲಾಗಿ ಹಡಗಿನ ಪ್ರತಿಯೊಬ್ಬ ಸಿಬ್ಬಂದಿ ಸಂಘಟಿತರಾಗಿ ಶ್ರಮಿಸಬೇಕು. ಈ ಬಗೆಯ ಸಂಘಟಿತ ನಾಯಕತ್ವವನ್ನು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ಪಡೆಯುವ ಅವಶ್ಯಕತೆಯಿಲ್ಲ. ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ವಿಷಯಗಳ ಆಳ ಜ್ಞಾನ ಪಡೆದರೆ ಸಾಕು. ಉತ್ತಮ ಗ್ರಹಿಕೆ ಮತ್ತು ಉತ್ತಮ ಸಾಮಾನ್ಯ ಜ್ಞಾನ ಹೊಂದಿದ್ದರೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ಸು ಕಾಣಬಹುದು. ಕೇವಲ ವೃತ್ತಿ ನೀಡುವ ಪರೀಕ್ಷೆಗಳಿಗೆ ಮಹತ್ವ ನೀಡುವುದರ ಬದಲಾಗಿ, ಆಯ್ದುಕೊಂಡ ಕೋರ್ಸಿನ ಮತ್ತು ಶಿಕ್ಷಣದ ಪ್ರತಿ ಕಿರು ಪರೀಕ್ಷೆಗಳನ್ನು ಕೂಡಾ ಗಂಭಿರವಾಗಿ ಪರಿಗಣಿಸಿ ಸತತ ಅಧ್ಯಯನ ಮತ್ತು ಪ್ರಯತ್ನಶೀಲರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗ ಪ್ರೊ. ಶಿವಾನಂದ ಹೊಸಮನಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರಿಗೆ ಉತ್ತಮ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ರಾಜ್ಯದ ಮೊದಲ ಮಹಿಳಾ ಡಿಜಿಪಿ ನಮ್ಮ ವಿವಿಗೆ ಆಗಮಿಸಿ, ನೀಡಿದ ಉಪನ್ಯಾಸವು ಸಾವಿರಾರು ವಿದ್ಯಾರ್ಥಿ ಮತ್ತು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಪ್ರೇರಣೆ ದೊರತಿದೆ ಎಂದರು.
ಎಡಿಜಿಪಿ ಡಾ. ಭಾಸ್ಕರರಾವ್, ಉತ್ತರ ವಲಯ ಐಜಿಪಿ ರಾಮಚಂದ್ರರಾವ್, ಎಸ್‍ಪಿ ಡಾ. ರವಿಕಾಂತೇಗೌಡ, ಸಿಂಡಿಕೇಟ್ ಸದಸ್ಯರಾದ ರಾಜು ಚಿಕ್ಕನಗೌಡರ, ಡಾ. ಮನೀಷಾ ನೇಸರಕರ್, ಡಾ. ಪೂರ್ಣಿಮಾ ಪಟ್ಟಣಶೆಟ್ಟಿ ಸೇಡಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕುಲಸಚಿವ ಪ್ರೊ. ಸಿದ್ದು ಅಲಗೂರ ಸ್ವಾಗತಿಸಿದರು. ಡಾ. ಅಶೋಕ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಂಗರಾಜ ವನದುರ್ಗ ವಂದಿಸಿದರು.

loading...