ಸಹಕಾರ ಮಹರ್ಷಿ ಬಸಗೌಡ ಪಾಟೀಲ ಜನ್ಮಶತಮಾನೋತ್ಸವದಲ್ಲಿ ಸಹಸ್ರಾರು ಜನಸ್ತೋಮ

0
19
loading...

ಸಂಕೇಶ್ವರ 11: ಮನುಷ್ಯ ಜೀವನದಲ್ಲಿ ಬೇಕು ಎಂಬುದನ್ನು ಬಿಟ್ಟು ಕೆಟ್ಟ ವಿಚಾರಗಳನ್ನು ತೊರೆದು ಸವಿಚಾರ, ಸದ್ಗುಣವಂತರಾದರೆ ಸಹಕಾರ ಮಹರ್ಷಿ ಬಸಗೌಡ ಪಾಟೀಲ ಅವರಂತೆ ನೂರ್ಕಾಲ್ ಬಾಳಬಹುದು ಎಂದು ಬಿಜಾಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದ ಹಿರಾಶುಗರ ಇಂಜಿನೀಯರಿಂಗ ಕಾಲೇಜು ಆವರಣದಲ್ಲಿ ಜರುಗಿದ ಸಹಕಾರ ಮಹರ್ಷಿ ಬಸಗೌಡ ಪಾಟೀಲ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಸಸಿಗೆ ನೀರೆರೆಯುವ ಉದ್ಘಾಟಿಸಿ ಮಾತನಾಡಿದ ಅವರು, ಓರ್ವ ಮನುಷ್ಯ ತನ್ನನ್ನು ತಾನು ಸ್ವಾರ್ಥ ರಹಿತವಾಗಿ ತೊಡಗಿಸಿಕೊಂಡಾಗಲೇ ಆತ ಮಹರ್ಷಿಯಾಗುತ್ತಾನೆ. ಬಸಗೌಡ ಪಾಟೀಲರು ಸಹ ಸೃಜನಶೀಲರಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಮೂಲಕ ಉತ್ತಮ ಸಮಾಜ ನಿರ್ಮಿಸುವ ಕಾಯಕ ಮಾಡಿದ್ದಾರೆ ಎಂದರು.
ಇಳಕಲ್ ಚಿತ್ತರಗಿ ಮಹಾಸಂಸ್ಥಾನ ವಿಜಯಮಹಾಂತ ಶಿವಯೋಗಿಗಳು ಮಾತನಾಡುತ್ತ, ಜೀವನದಲ್ಲಿ ನಿಶ್ಚಿತ ಗುರಿಯ ತಲುಪ ಹೊರಟ ಪ್ರತಿಯೊಬ್ಬ ಮನುಜ ಯೋಗಿಯಾಗುತ್ತಾನೆ. ಅದರಂತೆ ದುಷ್ಚಟಗಳನ್ನು ತೊರೆದು ತಮ್ಮ ಆರೋಗ್ಯದ ಜೊತೆಗೆ ಕುಟುಂಬ ಹಾಗೂ ಸಮಾಜದ ರಕ್ಷಣೆ ಮಾಡಿದ್ದಾರೆ ಎಂದರು.

ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಸಂಕೇಶ್ವರದಲ್ಲಿರುವ ಶ್ರೀ ದುರದುಂಡೀಶ್ವರ ಮಠದ ಜೀರ್ಣೋದ್ಧಾರಕ್ಕಾಗಿ ಸಂಸದರ ನಿಧಿಯಿಂದ 25 ಲಕ್ಷ ನೀಡುತ್ತೇನೆ. ನಿಡಸೋಸಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಗೊಳಿಸಿ 1 ಕೋಟಿ ಅನುದಾನ ಒದಗಿಸಲಾಗುವುದು ಎಂದರು.
ಸಾನಿಧ್ಯವಹಿಸಿದ್ದ ಸಂಕೇಶ್ವರ ಕರವೀರ ಶಂಕರಲಿಂಗ ಸಂಸ್ಥಾನದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಶ್ರೀಗಳು, ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿ ಡಾ. ಸಿದ್ಧರಾಮ ಮಹಾಸ್ವಾಮಿಗಳು, ಕನ್ಹೇರಿ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡುತ್ತ, ಶತ ವಸಂತಗಳ ಕಾಲ ಬದುಕಿ ಬಾಳಿದ ಬಸಗೌಡ ಪಾಟೀಲ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಪಾಟೀಲ ಪುಟ್ಟಪ್ಪ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಎ.ಬಿ. ಪಾಟೀಲ ಮಾತನಾಡುತ್ತ, ಬಸಗೌಡ ಪಾಟೀಲ ಅವರು ಇಂದಿನ ರಾಜಕೀಯ ವ್ಯವಸ್ಥೆಗೆ ಮಾದರಿಯಾಗಿದ್ದಾರೆಂದರು.
ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ಚಿಂಚಣಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಉಳಾಗಡ್ಡಿ ಖಾನಾಪೂರದ ಸಿದ್ದೇಶ್ವರ ಶಿವಾಚಾರ್ಯರು, ಹತ್ತರಗಿ ಕಾರೀಮಠದ ಗುರುಸಿದ್ಧ ಮಹಾಸ್ವಾಮಿಗಳು, ಬೆಲ್ಲದ ಬಾಗೇವಾಡಿ ಶಿವಾನಂದ ಮಹಾಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಮಹಾಸ್ವಾಮಿಗಳು, ಯರನಾಳದ ಬ್ರಹ್ಮಾನಂದ ಮಹಾಸ್ವಾಮಿಗಳು, ನಿಪ್ಪಾಣಿ ಪ್ರಾಣಲಿಂಗ ಸ್ವಾಮಿಗಳು, ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಮಣಕವಾಡದ ಸಿದ್ದರಾಮ ದೇವರು, ಹಾರನಹಳ್ಳಿ ಚೇತನ ದೇವರು ನೇತೃತ್ವ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಿರಾಶುಗರ ಇಂಜಿನೀಯರಿಂಗ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಸಿ. ಕಮತೆ ಸಹಕಾರ ಮಹರ್ಷಿ ಬಸಗೌಡ ಪಾಟೀಲ ಅವರಿಗೆ ಮಾನಪತ್ರ ಸಮರ್ಪಿಸಿದರು. ಡಾ. ಗುರುಪಾದ ಮರಿಗುದ್ದಿ ಸಂಪಾದಕತ್ವದಲ್ಲಿ ಬಸಗೌಡರು-ಶತಸ್ಮರಣೆ ಗ್ರಂಥವನ್ನು ಸಿದ್ದೇಶ್ವರ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

ಲಪ್ರಾರಂಭದಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲ ಸ್ವಾಗತಿಸಿದರು. ನಿಡಸೋಸಿಯ ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಬಸಗೌಡ ಪಾಟೀಲ ಅವರು, ತತ್ವ ನಿಷ್ಠ ಆದರ್ಶಗಳ ಪರಿಪಾಲನೆ ಮೂಲಕ ಸಮಾಜದ ಅಭ್ಯುದಯಕ್ಕೆ ನಾಂದಿಯಾಗಿದ್ದಾರೆ. ಅವರ ದೂರದೃಷ್ಟಿತ್ವದ ವಿಚಾರಧಾರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದರು. ಪಿಯು ಪ್ರಾಚಾರ್ಯ ಪ್ರೊ. ಬಿ.ಜಿ. ಪಾಟೀಲ ವಂದಿಸಿದರು.
ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಲಕ್ಷ್ಮಣರಾವ ಚಿಂಗಳೆ ವಿನಯಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...