ಸಾಮಾಜಿಕ ಶಾಂತಿ-ಸಹಬಾಳ್ವೆಗೆ ಮಾನವ ಹಕ್ಕುಗಳ ರಕ್ಷಣೆ ಅವಶ್ಯ

0
28
loading...

ಗದಗ : ಮಾನವೀಯ ಮೌಲ್ಯ ಹಾಗೂ ಸಹಬಾಳ್ವೆಯ  ಮೂಲಕ ಸರ್ವರೂ  ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ನೋಡಿಕೊಳ್ಳಬೇಕು. ನಮ್ಮ ಕರ್ತವ್ಯವನ್ನು ಪಾರದರ್ಶಕತೆಯಿಂದ ನಿಭಾಯಿಸಿದಲ್ಲಿ ಮಾನವ ಹಕ್ಕುಗಳ ರಕ್ಷಣೆಯನ್ನು ಮಾಡಿದಂತಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ರೇಣುಕಾ ಕುಲಕರ್ಣಿ ನುಡಿದರು. ಅವರಿಂದು ಗದಗ ಜಿಲ್ಲಾಡಳಿತದ ಮುಖ್ಯ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಧರ್ಮದ ಇನ್ನೊಂದು ಪರಿಭಾಷೆಯೇ ಕಾನೂನು. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಅವುಗಳನ್ನು ಪಾಲಿಸುವುದು  ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಿಸರದ ಮಾಲಿನ್ಯ ಹೆಚ್ಚಿದಲ್ಲಿ ಮುಂದಿನ ದಿನಮಾನಗಳಲ್ಲಿ ಉಸಿರಾಡಲು ಶುದ್ಧ ಗಾಳಿಗಾಗಿಯೂ ಪರದಾಡುವಂತಾಗುತ್ತಿದೆ. ಬದುಕಿನ ಮೌಲ್ಯ ಹಾಗೂ ಪರಿಸರವನ್ನು ರಕ್ಷಣೆ ಮಾಡಿದರೆ ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದರು. ಉಪನ್ಯಾಸ ನೀಡಿ ಬಾಲನ್ಯಾಯ ಮಂಡಳಿಯ ಸದಸ್ಯ ಜೆ.ಸಿ.ರೇಶ್ಮೆಯವರು ಭಾರತದ ಸಂವಿದಾನವೇ ಜಗತ್ತಿನ ಅತ್ಯಂತ ಶ್ರೇಷ್ಟವಾದ ಸಂವಿದಾನವಾಗಿದೆ. ಮನುಕುಲದ ಒಳಿತಿಗಾಗಿ  ಶ್ರಮಿಸುವುದೇ  ಮಾನವ ಹಕ್ಕುಗಳ ಮುಖ್ಯ ಉದ್ದೇಶವಾಗಿದೆ.  ವಿವಿಧತೆಯಲ್ಲಿ ಏಕತೆ ಹೊಂದಿರುವ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಮಾನವ ಹಕ್ಕುಗಳ ರಕ್ಷಣೆ ನಿರಂತರವಾಗಿ ನಡೆಯುತ್ತಿರುವ ಒಂದು ಪ್ರಕ್ರಿಯೆ.    ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಶಿಕ್ಷಣದೊಂದಿಗೆ ಒಳ್ಳೆಯ ಚಿಂತನೆ ನಡೆಸುವ ವಾತಾವರಣ ನೀಡಿ  ಸಮಾಜವನ್ನು ತಿದ್ದುವ  ಜವಾಬ್ದಾರಿ ಪ್ರತಿಯೊಬ್ಬರ ತಂದೆ ತಾಯಿ, ಶಿಕ್ಷಕರ  ಮೇಲಿದೆ. ಮಾನವ ಕುಲದ ಒಳಿತಿಗಾಗಿ ಮಾನವ ಹಕ್ಕುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಜಿಲ್ಲಾ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ ಅವರು ಮಾತನಾಡಿ ಮಾನವೀಯ ಹಾಗೂ ಜೀವನ ಮೌಲ್ಯಗಳಿಗೆ ಬೆಲೆ ಕಟ್ಟಲಾಗುವುದಿಲ್ಲ.  ಮಾನವ ಹಕ್ಕುಗಳಿಗೆ  ಚ್ಯುತಿಯಾದಾಗ ನಾಗರೀಕರ ರಕ್ಷಣೆಗಾಗಿ  ಮಾಡಲೆಂದೇ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ ಜಾರಿಯಾಯಿತು. ಸಾರ್ವಜನಿಕರಿಂದ ಬಂದ ಮನವಿಗಳ ಹಾಗೂ  ಬೇಡಿಕೆಗಳಿಗೆ ಸ್ಪಂದಿಸಿದರೆ  ಮಾನವ ಹಕ್ಕುಗಳ ರಕ್ಷಣೆ ಮಾಡಿದಂತೆಯೇ.  ಪ್ರಾಥಮಿಕ ಹಂತದಲ್ಲಿಯೂ ಶಾಲಾ ಮಕ್ಕಳಿಗೆ ಮಾನವ ಹಕ್ಕುಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಹೇಳಬೇಕು ಎಂದರು. ಅಪರ ಜಿಲ್ಲಾಧಿಕಾರಿ ರಮೇಶ ದೇಸಾಯಿ ಮಾನವ ಹಕ್ಕುಗಳ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು.  ಕೆ.ಡಿ. ಬಡಿಗೇರ ಸ್ವಾಗತಿಸಿದರು.    ಕಾರ್ಯಕ್ರಮದಲ್ಲಿ  ಜಿ.ಪಂ. ಉಪ  ಕಾರ್ಯದರ್ಶಿ ಎಸ್.ಸಿ.ಮಹೇಶ, ಕೃಷಿ  ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಬಾಲರೆಡ್ಡಿ,  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ರುದ್ರಪ್ಪ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

loading...