2018 ರಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿರುವುದು ಅನಿವಾರ್ಯ: ಸಿಎಂ ಸಿದ್ದರಾಮಯ್ಯ

0
24
loading...

ಮುಂಡಗೋಡ: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬಾರದೆಂದು ಜನರು ಪರಿವರ್ತನೆಯಾಗಿದ್ದಾರೆ. ಬಿಜೆಪಿ ಯವರು ಮೋದಿ, ಅಮಿತ ಶಾ ಅವರ ಹೆಸರಿನ ಮೇಲೆ ಗೆಲುವು ಸಾದಿಸುತ್ತೇವೆ ಎಂಬ ಭ್ರಮೆಯಲ್ಲಿ ಹೊರಟಿದ್ದಾರೆ. ಇದು ರಾಜ್ಯದಲ್ಲಿ ನಡೆಯುವುದಿಲ್ಲ. ಏಕೆಂದರೆ ಬಸವಣ್ಣ, ಕನಕದಾಸ, ಸಂತ ಶಿಶುನಾಳ ಶರೀಪ, ಕುವೆಂಪು ಅವರ ನಾಡು ಇದಾಗಿದ್ದು, ಸಮಾಜದಲ್ಲಿ ಶಾಂತಿ ಸಹಭಾಳ್ವೆ ನೆಲೆಸಬೇಕಾದರೆ ರಾಜ್ಯದ ಹಿತದೃಷ್ಟಿಯಿಂದ 2018 ರಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿರುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಇಲ್ಲಿಯ ತಾಲೂಕಾ ಕ್ರಿಡಾಂಗಣದಲ್ಲಿ 300 ಕೋಟಿ ವೆಚ್ಚದ ಕಮಗಾರಿಗಳ ಶಿಲಾನ್ಯಾಸ ಶಂಕುಸ್ತಾಪನೆ ಹಾಗೂ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಬಿಜೆಪಿಯ 17 ಲೋಕಸಭಾ ಸದಸ್ಯರಿದ್ದರೂ ಕೂಡ ಸಂಸದನಲ್ಲಿ ಒಬ್ಬರೂ ಕೂಡ ರಾಜ್ಯದ ಅಭಿವೃದ್ದಿ ಬಗ್ಗೆ ಚಕಾರೆತ್ತುವುದಿಲ್ಲ. ಉತ್ತರಕನ್ನಡ ಲೋಕಸಭಾ ಸದಸ್ಯರಿಗೆ ಅಭಿವೃದ್ದಿ ಎಂದರೇನು ಎಂಬುವುದೇ ಗೊತ್ತಿಲ್ಲ. ಅವರಿಂದೇನು ಅಭಿವೃದ್ದಿ ಬಯಸಲು ಸಾದ್ಯ. ಅಂತವರು ಈಗ ಮಂತ್ರಿಯಾಗಿದ್ದಾರೆ ಅವರು ಮಂತ್ರಿಯಾಗಲು ನಾಲಾಯಕು. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಾಲಯದಲ್ಲಿ ನಂಬಿಕೆ ಇಲ್ಲದವರು ಪರಿವರ್ತನೆಯಾಗುವ ಅವಶ್ಯಕತೆ ಇದೆ.
20 ಕ್ಕೂ ಹೆಚ್ಚು ಮಹಾ ನಾಯಕರ ಜನ್ಮ ದಿನಾಚರಣೆಯನ್ನು ರಾಜ್ಯ ಸರ್ಕಾರ ಆಚರಿಸುತ್ತದೆ. ಟಿಪ್ಪು ಸುಲ್ತಾನ ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಪತ್ರ ಬರೆದು ಕೋಮುವಾದ ಸೃಷ್ಟಿಸುವವರಿಗೆ ನಾಚಿಕೆಯಾಗಬೇಕೆಂದು ಗುಡುಗಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ದಲಿತ, ಹಿಂದುಳಿದ ವರ್ಗಗಳ ಬಗ್ಗೆ ಯಾವುದೇ ಕಾಳಜಿವಹಿಸದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಈಗ ಬಿಜೆಪಿ ನಡಿಗೆ ದಲಿತರ ಮನೆ ಕಡೆಗೆ ನೆಪದಲ್ಲಿ ದಲಿತರ ಮನೆಗೆ ಹೋಗಿ ಹೋಟೆಲ್‌ ತಿಂಡಿ ತಿಂದು ನಾಟಕವಾಡುತ್ತಿದ್ದಾರೆ. ದಲಿತ ಜನಾಂಗದ ಏಳ್ಗೆಗಾಗಿ ಅಪಾರವಾದ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ಸರ್ಕಾರ. ದೇಶದ ಯಾವುದೇ ರಾಜ್ಯದಲ್ಲಿ ನೀಡದಷ್ಟು ಯೋಜನೆ ಹಾಗೂ ಸಾಮಾಜಿಕ ನ್ಯಾಯವನ್ನು ನಾವು ಒದಗಿಸಿದ್ದೇವೆ. ಉತ್ತರನ ಪೌರುಷ ಒಲೆಯ ಮುಂದೆ ಎಂಬಂತೆ ರೈತರ ಸಾಲ ಮನ್ನಾ ಮಾಡಿ ಎಂದು ನಮ್ಮ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದ ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ರೈತರ ಕಾಳಜಿ ಇದ್ದಿದ್ದೇ ಆದರೆ ಪ್ರಧಾನಮಂತ್ರಿಗಳ ಮೇಲೆ ಒತ್ತಡ ತಂದು ಕೇಂದ್ರ ಸರ್ಕಾರದಿಂದ ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು. ಮನಮೋಹನ ಸಿಂಗ್‌ ಅವರ ಸರ್ಕಾರದಲ್ಲಿ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಅದು ಇವರಿಂದೇಕೆ ಸಾದ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ರೈತ ಪರ ಕಳಜಿ ಇಲ್ಲದ ಬಿಜೆಪಿ ಯವರಿಗೆ ರೈತರ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಸುಳ್ಳನ್ನು ಸತ್ಯದ ಮೇಲೆ ಹೊಡೆಯುವಂತೆ ಹೇಳುವುದೇ ಬಿಜೆಪಿಯವರ ಬಂಡವಾಳ.
ಮುಂಡಗೋಡ-ಯಲ್ಲಾಪುರ ಕ್ಷೇತ್ರದ 129 ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಪ್ರಸ್ತಾಪವಿದ್ದು, ಶೀಘ್ರದಲ್ಲಿಯೇ ಇದಕ್ಕೆ ಚಾಲನೆ ಕೂಡ ನೀಡಲಾಗುತ್ತದೆ ಎಂದು ಬರವಸೆ ನೀಡಿದ ಅವರು, ಮಾತು ಕೊಟ್ಟಂತೆ ಬನವಾಸಿ ಪ್ರಾಧಿಕಾರ ರಚನೆ ಮಾಡಿದ್ದೇವೆ.
ಲೋಕೋಪಯೋಗಿ ಸಚಿವ ಎಚ್‌.ಸಿ ಮಹಾದೇವಪ್ಪ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೋಗೆರ, ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‌, ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ, ತಾಲೂಕಾ ಬ್ಲಾಕ್‌ ಕಾಂಗ್ರೇಸ ಅಧ್ಯಕ್ಷ ರವಿಗೌಡ ಪಾಟೀಲ, ಜಿ.ಪಂ ಸದಸ್ಯೆ ಜಯಮ್ಮ ಕೃಷ್ಣ ಹಿರೇಹಳ್ಳಿ, ಪ.ಪಂ ಅಧ್ಯಕ್ಷ ರಪೀಕ್‌ ಇನಾಮದಾರ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಯಲ್ಲಾಪುರ ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಸ್ವಾಗತಿಸಿದರು.

loading...