ಅಂಗವಿಕಲರ ಬೇಡಿಕೆ ಈಡೇರಿಸುವಂತೆ ಮನವಿ

0
23
loading...

ಕನ್ನಡಮ್ಮ ಸುದ್ದಿ-ಕುಮಟಾ: ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡುವಂತೆ ಒತ್ತಾಯಿಸಿ ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟವು ಸೋಮವಾರ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ ಮೇಘರಾಜ ನಾಯ್ಕ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಅಂಗವಿಕಲರು ಕಳೆದ ಐದಾರು ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಿಂದಿನ ಚುನಾವಣೆಯಲ್ಲಿ ಅಂಗವಿಕಲರ ಹಲವು ಸಮಸ್ಯೆಗಳನ್ನು ಪರಿಹರಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇನ್ನು ನಮಗೆ ಯಾವುದೆ ಭಾಗ್ಯ ಯೋಜನೆ ನೀಡಿಲ್ಲ. ಜಿಪಂ, ತಾಪಂ, ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿಟ್ಟ ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗವಿಕಲರಿಗೆ ಮಾಸಿಕ ಜೀವನಾ ನಿರ್ವಹಣೆ ಭತ್ಯೆ ಕನಿಷ್ಟ 3 ಸಾವಿರ ರೂ ಶೇ.75ರಷ್ಟು ನ್ಯೂನ್ಯತೆ ಇರುವವರಿಗೆ 5 ಸಾವಿರ ರೂ ನೀಡಬೇಕು. ಅಂಗವಿಕಲರ ಹಕ್ಕುಗಳ ಕಾಯಿದೆ-2013 ಅನ್ನು ಲೋಕಸಭೆಯಲ್ಲಿ ಅನುಮೋದನೆಗೊಳಿಸಿ, ಜಾರಿ ಮಾಡಬೇಕು. ಅಂತ್ಯೋದಯ ಆಹಾರ ಪಡಿತರ ಚೀಟಿ ನೀಡಬೇಕು. ಸುಪ್ರಿಂ ಕೋರ್ಟ್‌ ಆದೇಶದನ್ವತ ಸರ್ಕಾರಿ ಉದ್ಯೋಗದ ನೇಮಕಾತಿಯಲ್ಲಿ ಆಂದೋಲನ ನಡೆಸಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು ಎಂದು ಮನವಿಯಲ್ಲಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ, ಪ್ರಮುಖರಾದ ಗಣೇಶ ಮೇಸ್ತಾ ಹೊನ್ನಾವರ, ಮಾದೇವ ದೇವಾಡಿಗ ಭಟ್ಕಳ, ಪ್ರಕಾಶ ನಾಯ್ಕ, ಪುಟ್ಟು ಗೌಡ, ಸಂತೋಷ ಶಾನಭಾಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...