ಅಂಡರ್‌ಪಾಸ್‌ ನಿರ್ಮಾಣಕ್ಕೆ ಆಗ್ರಹಿಸಿ ಹೆದ್ದಾರಿ ತಡೆ

0
22
loading...

ಕನ್ನಡಮ್ಮ ಸುದ್ದಿ-ಕಾರವಾರ: ಕಾರವಾರ ಗೋವಾ ರಾಜ್ಯದ ಗಡಿ ಬಳಿ ಇರುವ ರಾಮನಾಥ ದೇವಸ್ಥಾನ ಹತ್ತಿರ ಅಂಡರ್‌ಪಾಸ್‌ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಪಂಚಾಯಿತಿ, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ-66ನ್ನು ಸುಮಾರು ಒಂದು ತಾಸು ಕಾಲ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಗೋವಾ ರಾಜ್ಯದ ಗಡಿ ಹತ್ತಿರವಿರುವುದರಿಂದ ಇಲ್ಲಿ ಅತೀ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿಯವರಿಗೆ ಮಾಹಿತಿ ಇದ್ದರೂ ಕೂಡಾ ಅವರು ಕೈಕಟ್ಟಿ ಸುಮ್ಮನೆ ಕುಳಿತಿದ್ದಾರೆಂದು ಅರೋಪಿಸಿದ ಹೋರಾಟಗಾರರು, ಚತುಷ್ಪಥದ ಆರಂಭದಿಂದಲೂ ತಾವು ಅಂಡರ್‌ ಪಾಸ್‌ ನಿರ್ಮಾಣಕ್ಕೆ ಮನವಿ ನೀಡುತ್ತಾ ಬಂದಿದ್ದು ಆದರೆ ಅಧಿಕಾರಿಗಳು ತೀವ್ರ ನಿರ್ಲಕ್ಷ ವಹಿಸುತ್ತಿದ್ದಾರೆಂದು ಆರೋಪಿಸಿದರು. ಆರ್‌ ಟಿ ಐ ಮೂಲಕ ಪಡೆದ ಮಾಹಿತಿ ನೀಡಿದ ಹೋರಾಟಗಾರರು ಕಳೆದೊಂದು ದಶಕಗಳಲ್ಲಿ ಈ ಸ್ಥಳದಲ್ಲಿ ಸುಮಾರು 167 ಅಪಘಾತವಾಗಿದ್ದು ಅದರಲ್ಲಿ 50 ಜನ ಮೃತಪಟ್ಟು ಸುಮಾರು ಎರಡು ನೂರಕ್ಕೂ ಹೆಚ್ಚು ಜನರು ಅಂಗ ವೈಫಲ್ಯರಾಗಿದ್ದಾರೆಂದರು. ಹೋರಾಟಗಾರರ ಪರವಾಗಿ ಮಾತನಾಡಿದ ಸ್ಥಳೀಯ ಬಿ.ಜಿ.ಸಾವಂತ, ತಾವು ಅಭಿವೃದ್ಧಿಗೆ ಎಂದೂ ವಿರೋಧಿಗಳಲ್ಲ.
ನಾಗರಾಜ್‌ ಜೋಶಿ ಮತನಾಡಿ ಪ್ರತಿದಿನ ಸಾವಿರಾರು ಜನ ಇಲ್ಲಿ ಒಡಾಡುತ್ತಿದ್ದು ನಾಳೆ ಚತುಷ್ಪಥ ಹೆದ್ದಾರಿ ಆರಂಭವಾದಾಗ ಮಕ್ಕಳು, ವೃದ್ಧರು, ಮಹಿಳೆಯರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಬೇಕಾಗುತ್ತದೆ. ಭವಿಷ್ಯದಲ್ಲಿ ಇಲ್ಲಿ ಅಂಡರ್‌ಪಾಸ್‌ ನಿರ್ಮಾಣ ಮಾಡದೇ ಹೋದರೆ ಅಪಘಾತದ ಸಂಖ್ಯೆ ಹೆಚ್ಚುವ ಭಯವಿದೆ ಎಂದರು. ಕೇಂದ್ರ ಹೆದ್ದಾರಿ ಸಚಿವರಿಗೆ ಸಾರ್ವಜನಿಕರ ಪರವಾಗಿ ಅನೇಕ ಪತ್ರಗಳನ್ನು ಬರೆಯಲಾಗಿದೆ ಎಂದ ಸಾರ್ವಜನಿಕರು ಮುಂದಿನ ಒಂದು ವಾರದಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ಅಂಡರ್‌ಪಾಸ್‌ ನಿರ್ಮಾಣಕ್ಕೆ ಮುಂದಾಗಬೇಕು. ಒಂದೊಮ್ಮೆ ವಿಫಲವಾದರೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

loading...