ಅಧಿಕಾರ ದುರ್ಬಳಕೆ: ಅಹೋರಾತ್ರಿ ಧರಣಿ

0
14
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ : ಅಧಿಕಾರ ದುರ್ಬಳಕೆ ಮಾಡುತ್ತಿರುವ ತಾಲೂಕಿನ ಆಡೂರ ಗ್ರಾಮದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಆದಿಜಾಂಬವ ಮಾದಿಗ ಮಹಾಸಭಾ ವತಿಯಿಂದ ಇಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ಬುಧವಾರದಿಂದ ಅಹೋರಾತ್ರಿ ಧರಣಿ ಕೈಗೊಳ್ಳಲಾಗಿತ್ತು.
ಅಧಿಕಾರಿ ವಿರುದ್ಧ ಅವ್ಯವಹಾರದ ಹಲವಾರು ಆರೋಪಗಳು ಅಲ್ಲದೇ ಅಧಿಕಾರ ದುರುಪಯೋಗದ ಮೂಲಕ ದಲಿತರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಇದಕ್ಕೂ ಮುನ್ನ ಬೆಳಿಗ್ಗೆ ಇಲ್ಲಿನ ಕುಮಾರೇಶ್ವರ ವಿರಕ್ತಮಠದಿಂದ ತಹಶೀಲ್ದಾರ್‌ ಕಚೇರಿ ತನಕ ಮೆರವಣಿಗೆ ನಡೆಸಲಾಯಿತು.
ಆಡೂರ ಗ್ರಾಮದಲ್ಲಿ ಮಾತಂಗೆಮ್ಮ ದೇವಸ್ಥಾನ ಸಮೀಪ ಮಹಿಳಾ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡಲಾಗಿದೆ. ಇದು ಕಾನೂನು ಬಾಹೀರ ಎಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ, ಈ ಕುರಿತು ಆಡೂರ ಗ್ರಾಮದಲ್ಲಿ ದಲಿತರು ಪ್ರತಿಭಟನೆ ನಡೆಸಿ ಗಮನ ಸೆಳೆದರೂ ತಾಲೂಕು ಆಡಳಿತ ಕಣ್ತೆರದಿಲ್ಲ ಎಂದು ಧರಣಿ ನಿರತರು ಆಪಾಧಿಸಿದರು.
ಈ ಅಧಿಕಾರಿ ವಿರುದ್ಧ ಹಲವಾರು ಪ್ರಕರಣಗಳು ಲೋಕಾಯುಕ್ತ ಇಲಾಖೆಯಲ್ಲಿ ವಿಚಾರಣೆ ಹಂತದಲ್ಲಿವೆ. ಆದರೂ ಮೇಲಾಧಿಕಾರಿಗಳು ಈ ಅಧಿಕಾರಿಯನ್ನೇ ಬೆಂಬಲಿಸುತ್ತಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಿಜಾಂಬವ ಮಾದಿಗ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ ಹರಿಜನ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪ್ರೇಮಾ ಹರಿಜನ, ಮಹೇಶ ಹರಿಜನ, ಕೃಷ್ಣಾ ಹರಿಜನ, ಫಕ್ಕೀರೇಶ ಹರಿಜನ, ಶೇಖರ ಹರಿಜನ, ಸಿದ್ಧಪ್ಪ ಮಾದರ, ಅರುಣ ಮಣ್ಣಮ್ಮನವರ ಧರಣಿಯಲ್ಲಿ ಭಾಗವಹಿಸಿದ್ದರು.

loading...