ಅಳಿವಿನಂಚಿನಲ್ಲಿ ಸಮುದ್ರದ ಜೀವಿಗಳು

0
16
loading...

ಕನ್ನಡಮ್ಮ ಸುದ್ದಿ-ಕಾರವಾರ: ಸಮುದ್ರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಬುಲ್‌ ಟ್ರಾಲ್‌, ಪ್ಲಡ್‌ ಲೈಟಿಂಗ್‌ ಮೀನುಗಾರಿಕೆಯಿಂದ ಕೆಲ ಮೀನುಗಳ ಸಂತತಿಯೇ ನಾಶವಾಗುವ ಆತಂಕ ಇದ್ದು, ಕೂಡಲೇ ಅದನ್ನು ಸ್ಥಗಿತಗೊಳಿಸುವಂತೆ ಕುಮಟಾ ಹಾಗೂ ಕಾರವಾರ ತಾಲೂಕಿನ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಕಾರವಾರದ ಮುದಗಾ, ಹಾರವಾಡ, ದೇವಭಾಗ ಹಾಗೂ ಕುಮಟಾದ ಮೀನುಗಾರರು ಜಿಲ್ಲಾಧಿಕಾರಿ ಎಸ್‌.ಎಸ್‌ ನಕುಲ್‌ ಅವರನ್ನು ಭೇಟಿ ಮಾಡಿ, ಅರಬ್ಬಿ ಸಮುದ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಯ ಜನರು ಸೇರಿದಂತೆ ಸ್ಥಳೀಯ ಕೆಲವರು ಬುಲ್‌ ಟ್ರಾಲ್‌, ಪ್ಲಡ್‌ ಲೈಟಿಂಗ್‌ ಮೂಲಕ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇಂತಹ ಅಕ್ರಮ ಮೀನುಗಾರಿಕೆ ಇತ್ತೀಚಿನ ದಿನಗಳಲ್ಲಿ ಮೀತಿಮೀರಿ ನಡೆಯುತ್ತಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ಸರಕಾರ ಈಗಾಗಲೇ ಬುಲ್‌ಟ್ರಾಲ್‌ ಸೇರಿದಂತೆ ಅನಧಿಕೃತವಾಗಿ ನಡೆಸುತ್ತಿರುವ ಮೀನುಗಾರಿಕೆಯನ್ನು ನಿಷೇಧಿಸಿದೆ. ಆದರೆ ಆದೇಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕೆಲ ಮೀನುಗಾರರು ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಅವೈಜ್ಞಾನಿಕವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಕೆಲ ಅಪರೂಪದ ಮೀನಿನ ಸಂತತಿ ನಾಶವಾಗುವ ಆತಂಕ ಎದುರಾಗಿದೆ. ಇಂತಹ ಅನಧಿಕೃತ ಮೀನುಗಾರಿಕೆಗೆ ಆರಂಭದಲ್ಲಿಯೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕುಮಟಾದ ನಂದ ಜಾದವ, ಸುಧಾಕರ ತಾರಿ, ಪಾಂಡುರಂಗ ಚೋಡನಕರ್‌, ರಾಘವೇಂದ್ರ ಇನ್ನಿತರರು ಇದ್ದರು.

loading...