ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅವಶ್ಯ

0
20
loading...

ಕನ್ನಡಮ್ಮ ಸುದ್ದಿ-ಗದಗ : ಉತ್ತಮ ಜೀವನಕ್ಕೆ ಸದೃಢ ದೇಹ ಹೊಂದಿರಬೇಕು. ಸದೃಢ ದೇಹ ಹೊಂದಿರಬೇಕಾರೆ ತಿನ್ನುವ ಆಹಾರಗಳು ಶಕ್ತಿಯುತವಾಗಿರಬೇಕು. ಇಂತಹ ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅವಶ್ಯಕವಾಗಿ ಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
ಅವರು ನಗರದ ಜ. ಪಂಚಾಚಾರ್ಯ ಮಾಂಗಲ್ಯಮಂದಿರದಲ್ಲಿ ಜ.ಪಂಚಾಚಾರ್ಯ ಸೇವಾ ಸಂಘದ ಆಶ್ರಯದಲ್ಲಿ “ಅಮೃತವಾಹಿನಿ ಕಾರ್ಯಕ್ರಮದಲ್ಲಿ “ಆರೋಗ್ಯದಲ್ಲಿ ಸಿರಿಧಾನ್ಯಗಳ ಪಾತ್ರ”ವಿಷಯವಾಗಿ ಉಪನ್ಯಾಸ ನೀಡಿದರು. ಮುಂದುವರೆದು ಮಾತನಾಡಿದ ಅವರು ಇಂದು ನಾವು ರಾಸಾಯನಿಕ ಗೊಬ್ಬರದ ಹಿಂದೆ ಬೆನ್ನು ಹತ್ತಿ ನಮ್ಮ ಫಲವತ್ತಾದ ಭೂಮಿಯನ್ನು ಹಾಳುಮಾಡಿ ಕೊಳ್ಳುತ್ತಿದ್ದೇವೆ. ಇದರ ಬದಲಾಗಿ ಸಾವಯವ ಕೃಷಿ ಮಾಡಿ ನಮ್ಮ ಭೂಮಿಯ ಮಣ್ಣನ್ನು ಮತ್ತಷ್ಟು ಫಲವತ್ತಾಗಿಸಿಕೊಳ್ಳಬೇಕು.
ಹೆಚ್ಚಿನ ಬೆಳೆ ಬರುವುದೆಂಬ ಆಸೆಯಿಂದ ಬೆಳೆಗಳಿಗೆ ವಿಷಪೂರಿತ ಕ್ರಿಮಿನಾಶಕ ಎಣ್ಣೆಯನ್ನು ಸಿಂಪಡಿಸಿ ಅದರಿಂದ ಬರುವ ಕಾಳುಗಳನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ಅನೇಕ ರೋಗಗಳಿಗೆ ಬಲಿಯಾಗಿ ಆಸ್ಪತ್ರೆಗಳಿಗೆ ಅಲೆಯುತ್ತಿದ್ದೇವೆ. ಇದರಿಂದ ಮಾನಸಿಕ ಸ್ಥಿತಿ ಕಳೆದುಕೊಂಡು ಅರ್ಥಿಕತೆಯಿಂದ ನರಳಾಡುತ್ತಿದ್ದೇವೆ ಎಂದರು. ಸಾನಿಧ್ಯ ವಹಿಸಿದ್ದ ಅಳವಂಡಿ ಕಟ್ಟಿಮನಿ ಹಿರೇಮಠದ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ ಇಂದು ನಮ್ಮ ಯುವಕರು ಸದೃಢ ಮನಸ್ಸನ್ನು ಹೊಂದಿ ಉತ್ತಮ ಆರೋಗ್ಯಯುತ ಜೀವನ ಮಾಡಬೇಕಾಗಿದೆ. ಧರ್ಮದ ವಿಷಯ ಬಂದಾಗ ಯಾವದು ಸತ್ಯ ಯಾವುದು ಮಿಥ್ಯ ಎನ್ನುವ ವಿಚಾರವನ್ನು ದೃಢಮನಸ್ಸಿನ ನಿರ್ಧಾರದೊಂದಿಗೆ ಕೈಕೊಳ್ಳಬೇಕಾಗಿದೆ ಎಂದರು.
ರಾಜ್ಯಮಟ್ಟದ ಉದಯೋನ್ಮುಖ “ಕೃಷಿ ಪಂಡಿತ ಪ್ರಶಸ್ತಿ ಪಡೆದ ಅಶೋಕ ಹಳ್ಳಿ ಅವರನ್ನು ಹಾಗೂ ತಾಲೂಕ ಮಟ್ಟದ ಕೃಷಿ ಪ್ರಶಸ್ತಿ ಪಡೆದ ಅವರ ಧರ್ಮಪತ್ನಿ ಶ್ರೀಮತಿ ಯಶೋಧಾ ಅವರನ್ನು ಹಾಗೂ ರಾಜ್ಯಮಟ್ಟದ “ಪುರೋಹಿತ ರತ್ನ”ಪ್ರಶಸ್ತಿ ಪಡೆದ ವೇ. ಮೂ ಶರಣಯ್ಯಶಾಸ್ತ್ರಿಗಳು ಯಾವಗಲ್‌ಮಠ ದಂಪತಿಗಳನ್ನು ಸನ್ಮಾನಿಸಲಾಯಿತು.
ವೇದಘೋಷವನ್ನು ಚನಬಸಯ್ಯ ಹೇಮಗಿರಿಮಠ ಮಾಡಿದರು. ಮಲ್ಲಿಕಾರ್ಜುನ ಗವಾಯಿ ನೇಗಿನಹಾಳ ಸಂಗಡಿಗರು ಸಂಗೀತ ನಡೆಸಿಕೊಟ್ಟರು. ಬಸಣ್ಣ ಮಲ್ಲಾಡದ ಸ್ವಾಗತಿಸಿದರು ಮಲ್ಲಯ್ಯಸ್ವಾಮಿ ಮುತ್ತಿನಪೆಂಡಿಮಠ ಪರಿಚಯಿಸಿದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿದರು.

loading...