ಎಲ್ಲರೂ ಸಂವಿಧಾನಾತ್ಮಕ ಅರಿವು ಹೊಂದಿರಬೇಕು: ಖಾನ್‌

0
24
loading...

ಕನ್ನಡಮ್ಮ ಸುದ್ದಿ-ಕಾರವಾರ: ನಮ್ಮನ್ನು ಸೃಷ್ಟಿಸಿದ ದೇವರು ನಮಗೆ ಒಳ್ಳೆಯ ಜೀವನವನ್ನು ದಯಪಾಲಿಸಿದ್ದು, ನಾವು ಒಳ್ಳೆಯ ಪಥದಲ್ಲಿ ಸಾಗಿ ಜೀವನದಲ್ಲಿ ತಾಳ್ಮೆ, ಶಿಸ್ತು ಹಾಗೂ ಸಂವಿಧಾನಾತ್ಮಕ ಅರಿವು ಹೊಂದುವುದರಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆ ಅನುಭವಿಸುವ ಸಂದರ್ಭ ಎದುರಾಗುವುದಿಲ್ಲ. ಸ್ವಾಮಿವಿವೇಕಾನಂದರು ಸಹ ಎಷ್ಟೇ ಕಷ್ಟ ಬಂದರೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ಸನ್ನು ಕಂಡುಕೊಂಡಿದ್ದರು. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಇಂಡಿಯನ್‌ ನೇವಿಯ ನಿವೃತ್ತ ಕಮೋಡೋರ್‌ ಸಿ.ಜೆ.ಸಿಲಾರ್‌ ಖಾನ್‌ ಹೇಳಿದರು.
ಅವರು ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚರಣೆಯ ನಿಮಿತ್ತ ನೆಹರು ಯುವ ಕೇಂದ್ರ ,ಕಲ್ಲೂರ್‌ ಎಜ್ಯಕೇಶನ್‌ ಟ್ರಸ್ಟ್‌ , ಆಝಾದ್‌ ಯುಥ್‌ ಕ್ಲಬ್‌ , ಪ್ರೇಮಾಶ್ರಮ ಚಾರಿಟೇಬಲ್‌ ಟ್ರಸ್ಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ರಾಷ್ಟ್ರೀಯ ಯುವ ಸಪ್ತಾಹ 2018ರ ಮೂರನೇದಿನದ ಅಂಗವಾಗಿ ಖೈದಿಗಳಿಗಾಗಿ ಉಚಿತ ರಕ್ತದ ಗುಂಪು ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವಾಯ್‌. ಸದಾಶಿವ ಮಾತನಾಡಿ, ರಕ್ತದ ಗುಂಪು ತಪಾಸಣೆ ಕಾರ್ಯಕ್ರಮವು ಉತ್ತಮವಾದ ಕಾರ್ಯವಾಗಿದೆ. ಇದರಿಂದ ರಕ್ತದ ಅವಶ್ಯಕತೆ ಬಿದ್ದಾಗ ರಕ್ತ ಪಡೆಯಲು ಹಾಗೂ ದಾನಮಾಡಲು ಸಹಾಯಕವಾಗುತ್ತದೆ. ಖೈದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರಾಗೃಹದಲ್ಲಿರುವ ಎಲ್ಲಾ ಖೈದಿಗಳಿಗೂ ಉಚಿತ ರಕ್ತದ ಗುಂಪು ತಪಾಸಣೆ ನಡೆಸಲಾಯಿತು. ಖೈದಿಗಳಿಗಾಗಿ ಕೇರಂ , ಚೆಸ್‌ ಬೋರ್ಡ್‌ ಹಾಗೂ ಇನ್ನಿತರ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಬ್ಲಡ್‌ ಟೆಕ್ನೀಶಿಯನ್‌ರಾದ ರುಖಿಯಾ ಖಾನ್‌, ಪ್ರಿಯಾಂಕಾ ಪೆಡ್ನೇಕರ್‌ ಹಾಗೂ ಅರುಣ ನಾಯ್ಕ ರಕ್ತದ ಗುಂಪು ತಪಾಸಣೆ ನಡೆಸಲು ನೆರವಾದರು. ಭಾರತೀಯ ರೆಡ್‌ ಕ್ರಾಸ್‌ನ ಸದಸ್ಯೆ ಫೈರೋಜಾಬೇಗಂ ಶೇಖ್‌ ಸ್ವಾಗತಿಸಿ,ವಂದಿಸಿದರು. ನಿವೃತ್ತ ಪ್ರಾಚಾರ್ಯ ಪ್ರೊ.ಅಬ್ದುಲ್‌ ಖಯ್ಯುಂ ಖಾನ್‌, ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್‌ ಅಹಮದ್‌ ಯು.ಶೇಖ್‌ ಹಾಗೂ ಕಾರಾಗೃಹದ ಮೇಲ್ವಿಚಾರಕ ಗುರುರಾಜ ವಾಯ್‌ಗೋಳ, ರಾಘವೇಂದ್ರ ಶಾನಭಾಗ ,ಕ್ಲಬ್‌ನ ಕಾರ್ಯದರ್ಶಿ ಮೊಹಮ್ಮದ್‌ ಉಸ್ಮಾನ್‌ ಶೇಖ್‌, ಜಂಟಿ ಕಾರ್ಯದರ್ಶಿ ನೂತನ್‌ ಜೈನ್‌ ಉಪಸ್ಥಿತರಿದ್ದರು.

loading...