ಐತಿಹಾಸಿಕ ಕ್ಷೇತ್ರಕ್ಕೆ ಶಾಸಕ ಇನಾಮದಾರ ಕೊಡುಗೆ ಶೂನ್ಯ ಃ ಕೊಟಬಾಗಿ

loading...

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು.

ಸುಮಾರು ನಲವತ್ತು ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿರುವ ಶಾಸಕ ಡಿ.ಬಿ. ಇನಾಮದಾರ ಜನರ ಆಶೀರ್ವಾದದಿಂದ 5 ಸಲ ಶಾಸಕರಾಗಿ ಪಕ್ಷದಲ್ಲಿ ಮಹತ್ತರ ಹುದ್ದೆ, ಮಂತ್ರಿ ಸ್ಥಾನಗಳನ್ನು ಪಡೆದು ಅಕಾರ ಅನುಭವಿಸಿದರೇ ವಿನಃ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಕೊಡುಗೆ ನೀಡಿಲ್ಲ. ಐತಿಹಾಸಿಕ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಹನುಮಂತ ಕೊಟಬಾಗಿ ಆರೋಪಿಸಿದರು. ಸಮೀಪದ ನಂದಿಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದು, ಕಿತ್ತೂರು ಆಡಳಿತಾರೂಢ ಪಕ್ಷದ ಶಾಸಕರನ್ನು ಹೊಂದಿದ್ದರೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಆಗದೇ ಐದು ವರ್ಷ ಮತ್ತೇ ಅಭಿವೃದ್ಧಿಯಿಂದ ವಂಚಿತವಾಗಿದೆ  ಎಂದರು.  ಸದ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತಿರುವ ಇನಾಮದಾರ, ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದು ಕ್ಷೇತ್ರದ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗ ಎಷ್ಟೇ ಓಡಾಡಿದರೂ ಪ್ರಯೋಜನ ಆಗುವುದಿಲ್ಲ. ಜನರು ಪ್ರಜ್ಞಾವಂತ ಆಗಿದ್ದು ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಿತ್ತೂರಿನಲ್ಲಿ ಬಿಜೆಪಿ ಬಾವುಟ ಹಾರುವುದರಲ್ಲಿ ಎರಡು ಮಾತಿಲ್ಲ ಎಂದರು.  ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಕಿತ್ತೂರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿತ್ತು. ಕಿತ್ತೂರು ತಾಲೂಕಾ ಘೋಷಣೆ, ಕಿತ್ತೂರು ಅಭಿವೃದ್ಧಿ ಪ್ರಾಕಾರ ರಚನೆ, ಗಂಗಾಂಭಿಕಾ ದೇವಸ್ಥಾನದ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಯೋಜನೆ ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ಆನಂದ ಅಪ್ಪುಗೋಳ ಅಖಾಡದಲ್ಲಿದ್ದ ಪರಿಣಾಮ ನಾವು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಆದರೆ ಇಂದಿನ ಸ್ಥಿತಿ ಬೇರೆಯಿದ್ದು, ಮುಂದಿನ ದಿನಗಳಲ್ಲಿ ಗೆಲುವು ನಮ್ಮದೇ ಎಂದರು.  ಈ ಹಿಂದೆ ನಮ್ಮ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀ ರಕ್ಷೆ ಆಗಿದೆ. ಇದನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಹೈಕಮಾಂಡ್ ನಿರ್ಣಯವೇ ಕೊನೆ. ಟಿಕೇಟ್ ಹಂಚಿಕೆಯಲ್ಲಿ ಗೊಂದಲ ಇದೆ ಆದರೆ ಚುನಾವಣೆಯಲ್ಲಿ ಗೊಂದಲ ಇಲ್ಲ. ಯಾರಿಗೆ ಟಿಕೇಟ್ ಸಿಕ್ಕರೂ ಒಗ್ಗಟ್ಟಾಗಿ ಎಲ್ಲರೂ ಸೇರಿ ಚುನಾವಣೆ ಎದುರಿಸಿ ಕಿತ್ತೂರಿನಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದರು. ಕಿತ್ತೂರಿನ ರಾಜಕೀಯದಲ್ಲಿ ಬಾರೀ ಬದಲಾವಣೆ ಗಾಳಿ ಬೀಸಿದ್ದು, ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ ಪಾಟೀಲ ಬಿಜೆಪಿ ಸೇರುವರೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹನುಮಂತ ಕೊಟಬಾಗಿ ಅವರು, ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ಇದ್ದು, ಅವರು ಪಕ್ಷಕ್ಕೆ ಬಂದರೆ ಆನೆಬಲ ಬಂದಂತಾಗುತ್ತದೆ. ಪಕ್ಷಕ್ಕೆ ಯಾರೇ ಬಂದರೂ ಮುಕ್ತ ಮನಸ್ಸಿನಿಂದ ನಾವು ಸ್ವಾಗತಿಸುತ್ತೇವೆ ಎಂದರು.

loading...