ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಮನೋಜ

0
17
loading...

ಗದಗ : ಕ್ರೀಡೆಯಿಂದ ಉತ್ತಮ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕೆಲಸದ ಒತ್ತಡ ನಿವಾರಣೆ ಜೊತೆಗೆ ಹೆಚ್ಚು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮನೋಜ ಜೈನ್‌ ಹೇಳಿದರು.
ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗದಗ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸತತ ಪರಿಶ್ರಮದಿಂದ ಕಾರ್ಯ £ರ್ವಹಿಸುತ್ತಿದೆ. ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲಿ ಪೊಲೀಸ್‌ ಕ್ರೀಡಾಕೂಟವನ್ನು ವರ್ಷಕ್ಕೆ ಎರಡು ಭಾರಿ ಆಯೋಜಿಸುವ ಕುರಿತು ಚಿಂತಿಸಲಾಗುತ್ತದೆ. ಜಿಲ್ಲಾಡಳಿತ ಕಚೇರಿ ಹಾಗೂ ವಿವಿಧ ಇಲಾಖೆಗಳ ಜೊತೆಗೂಡಿಕೊಂಡು ಪ್ರತಿ ಭಾನುವಾರ ಯಾವುದಾದರೊಂದು ಕ್ರೀಡೆಯನ್ನು ನಡೆಸುವುದರಿಂದ ಕೆಲಸದ ಒತ್ತಡ ನಿರ್ವಹಣೆ ಜೊತೆಗೆ ಇಲಾಖೆಗಳ ಮಧ್ಯೆ ಸಹಕಾರ ಹಾಗೂ ಸೌಹಾರ್ದತೆ ಬೆಳೆಯುತ್ತದೆ ಎಂದು ಮನೋಜ್‌ ಜೈನ್‌ ನುಡಿದರು.
ಜಿ.ಪಂ. ಸಿಇಓ ಮಂಜುನಾಥ ಚವ್ಹಾಣ ಅವರು ಮಾತನಾಡಿ, ಕ್ರೀಡೆಗಳಿಂದ ಸದೃಢ ಆರೋಗ್ಯ ಪ್ರಾಪ್ತಿಯಾಗುತ್ತದೆ. ಕೇವಲ ಇಲಾಖೆಗಳ ಕಚೇರಿ ಕೆಲಸಕ್ಕೆ ಮಾತ್ರ ಸೀಮಿತವಾಗದೇ ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು ಎಂದರು.
ಇದಕ್ಕೂ ಮುನ್ನ ಡಿಎಆರ್‌ ಗದಗ, ಗದಗ ಶಹರ, ಬೆಟಗೇರಿ, ಗದಗ ಗ್ರಾಮೀಣ, ರೋಣ, ಶಿರಹಟ್ಟಿ, ನರಗುಂದ ಹಾಗೂ ಮುಂಡರಗಿ ವಿಶೇಷ ಘಟಕದ ಏಳು ತಂಡಗಳು ಶಿಸ್ತಿನಿಂದ ಪಥ ಸಂಚಲನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರ್‌ಎಸ್‌ಐ ಗದಗ ವಿಭಾಗದ ಎ.ಬಿ. ಬಸನಗೌಡ್ರ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಗದಗ ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ. ಸಂತೋಷಬಾಬು ಸ್ವಾಗತಿಸಿದರು. ಡಿಎಸ್‌ಪಿ ಗುರು ಮತ್ತೂರ ವಂದಿಸಿರು.

loading...