ಓವರ ಬ್ರಿಡ್ಜ್‌ ನಿರ್ಮಿಸುವಂತೆ ಗ್ರಾಮಸ್ಥರ ಒತ್ತಾಯ

0
19
loading...

ಕನ್ನಡಮ್ಮ ಸುದ್ದಿ-ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಭಾಗದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದವನ್ನಾಗಿ ಪರಿವರ್ತಿಸುವ ಕಾಮಗಾರಿಯನ್ನು ಐ ಆರ್‌ ಬಿ ಕಂಪನಿಯವರು ನಡೆಸುತ್ತಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿರುವುದರಿಂದ ರಸ್ತೆ ದಾಟುವಾಗ ಅವಘಡ ಸಂಭವನೀಯವಾಗುವುದರಿಂದ ತಾಲೂಕಿನ ಮಿರ್ಜಾನ ಹೈಸ್ಕೂಲ ಪಕ್ಕದ ಕೋಡ್ಕಣಿ ಕ್ರಾಸ್‌ ನಿಂದ ಪ್ರಾಥಮಿಕ ಶಾಲೆಯಿರುವ ಕೋಟೆವರೆಗೆ ಓವರ ಬ್ರಿಡ್ಜ್‌ ನಿರ್ಮಿಸುವಂತೆ ಪ್ರಜ್ಞಾವಂತ ನಾಗರಿಕಕ ಆಗ್ರಹವಾಗಿದೆ.
ಈ ರಸ್ತೆಯ ಅಕ್ಕ ಪಕ್ಕ ದೇವಸ್ಥಾನ, ಕಲ್ಯಾಣ ಮಂಟಪ, ಬ್ಯಾಂಕ್‌, ಸೊಸೈಟಿ, ವಾಚನಾಲಯ ಗ್ರಾ ಪಂ ನಾಡಕಛೇರಿ, ಪಶುಚಿಕಿತ್ಸಾಲಯ ಸೇರಿದಂತೆ ಸರಕಾರಿ ಕಛೇರಿಗಳಿದ್ದು, ಜನರು ನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವ ರಸ್ತೆ ಯಾಗಿದೆ. ಅಲ್ಲದೆ ಪ್ರಾಥಮಿಕ ಪ್ರೌಢಶಾಲಾ ಮಕ್ಕಳಿಗೂ ಇದೇ ರಸ್ತೆಯೆ ಶಾಲೆಗೆ ಹೊಗುವ ರಸ್ತೆಯಾಗಿದೆ. ಹಾಗೆಯೆ ತಲೆಯ ಮೇಲೆ ಕಟ್ಟಿಗೆಯನ್ನು ಹೊತ್ತು ತರುವ ಬಡ ಮಹಿಳೆಯರಿಗೂ ಇದೇ ರಸ್ತೆ ಪ್ರಮುಖವಾಗಿದೆ.
ಹೀಗಿರುವಾಗ ಶಾಲಾ ಮಕ್ಕಳಿಗಾಗಲಿ, ಕಟ್ಟಿಗೆ ಹೊತ್ತು ತರುವ ಮಹಿಳೆಯರಾಗಲಿ, ಸರಕಾರಿ ಕೆಲಸ ಕಾರ್ಯಗಳಿಹಗೆ ಓಡಾಡುವ ಗ್ರಾಮಸ್ಥರಿಗೆ ರಸ್ತೆ ದಾಟಲು ಸಮಸ್ಯೆಯಾಗಿದೆ. ಅಲ್ಲದೇ ಐ ಆರ್‌ ಬಿ ಕಂಪನಿಯವರ ಸರ್ವೇ ಅವೈಜ್ಞಾನಿಕತೆಯಿಂದ ಕೂಡಿದ್ದು, ಹೆದ್ದಾರಿಯ ಕೇಂದ್ರ ಸ್ಥಳದಿಂದ ಎಡ ಬಲಕ್ಕೆ ಸಮಾನಾಂತರವಾಗಿ ಸ್ಥಳಸರ್ವೆ ಮಾಡಿಸಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ.
ಮಿರ್ಜಾನ ರಾಮನಗರ ಕ್ರಾಸ್‌ಗೆ ರೇಲ್ವೆ ಇಲಾಖೆ ಓವರ ಬ್ರಿಡ್ಜ್‌ ನಿರ್ಮಿಸದೇ ಇರುವುದರಿಂದ ಅಲ್ಲಿನ ಜನ ಈಗಲೂ ನಿತ್ಯ ಓಡಾಟಕ್ಕೆ ಗಂಟೆಗಟ್ಟಲೆ ನಿಂತು ತೊಂದರೆ ಪಡಬೇಕಿದೆ. ರಸ್ತೆಯ ಒಂದೇ ಕಡೆ 45 ಮೀಟರನಷ್ಟು ಸರ್ವೆ ನಡೆಸಿದ್ದಾರೆ.
ಈ ಕುರಿತಂತೆ ಉಸ್ತುವಾರಿ ಸಚಿವ ಆರ್‌ ವಿ ದೇಶಪಾಂಡೆಯವರಿಗೂ ವ್ಯಾಪಾರಸ್ಥರ ನಿಯೋಗ ಸಮಸ್ಯೆ ಮನದಟ್ಟು ಮಾಡಿದ್ದಾರೆ. ಅಲ್ಲದೆ ಐ ಆರ್‌ ಬಿ ಕಂಪನಿಯವರಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಸಚಿವರು ಜಿಲ್ಲಾಧೀಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಲ್ಲುವ ಭರವಸೆ ನೀಡಿದ್ದಾರೆನ್ನಲಾಗಿದೆ. ಸಚಿವ ದೇಶಪಾಂಡೆ ಆದಷ್ಟು ಬೇಗ ತಿರ್ಮಾಣ ಕೈಗೊಂಡು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಓವರ್‌ ಬ್ರಿಡ್ಜ್‌ ನಿರ್ಮಿಸಲು ಮುಂದಾಗಬೇಕು ಎಂದು ಮಿರ್ಜಾನ ಗ್ರಾಮಸ್ಥರ ಒತ್ತಾಯವಾಗಿದೆ.

loading...