ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಶೋಧ

0
24
loading...

ಕನ್ನಡಮ್ಮ ಸುದ್ದಿ-ಇಳಕಲ್‌: ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲಾಶಾಸನವೊಂದನ್ನು ಶೋಧಿಸಲಾಗಿದೆ.
ಇದೇ ತಾಲೂಕಿನ ಚಿಕ್ಕಸಿಂಗನಗುತ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಅಂಗಡಿ ಈ ಶಾಸನವನ್ನು ಶೋಧನೆ ಮಾಡಿದ್ದಾರೆ. ಶಿವನಗೌಡ ಪಾಟೀಲ ಅವರ ಮನೆಯ ಮುಂದೆ ನಿಲ್ಲಿಸಲಾಗಿರುವ ಈ ಶಾಸನ ಇಪ್ಪತ್ನಾಲ್ಕು ಸಾಲುಗಳನ್ನು ಹೊಂದಿದ್ದು, ಸುಮಾರು ನಾಲ್ಕು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿದೆ. ಈ ಶಾಸನವು ದಾನ ಶಾಸನವಾಗಿದ್ದು, ಕಲ್ಯಾಣ ಚಾಲುಕ್ಯರ ಜಗದೇಕ ಮಲ್ಲನ ಆಳ್ವಿಕೆಯ ಕಾಲದ್ದಾಗಿದೆ. ಶಾಸನದಲ್ಲಿಯ “ಸಕವರ್ಸ ಯುವ ಸಂವತ್ಸರ”ವು ಶಾಲಿವಾಹನ ಶಕೆ 1137ಕ್ಕೆ ಹೊಂದಿಕೆಯಾಗುತ್ತದೆ. “ಚೈತ್ರ ಶುದ್ಧ ದಿತ್ಯವಾರ” ದಂದು ಇನ್ನೂರು ನಾಣ್ಯ ದಾನ ನೀಡಿದ್ದನ್ನು ಈ ಶಾಸನ ಹೇಳುತ್ತದೆ.
“ಕರೆವಿಡಿ 30 ಹಾಗೂ ಅಗ್ರಹಾರ ಸಗರ…..40 ಊರಿನ ಹೆಸರುಗಳೂ ಶಾಸನದಲ್ಲಿ ಉಲ್ಲೇಖವಾಗಿವೆ. ಶಾಸನದ ಹೆಚ್ಚಿನ ಭಾಗ ತ್ರುಟಿತವಾಗಿರುವದರಿಂದ ಶಾಸನದ ಪೂರ್ಣ ಪಾಠ ಲಭ್ಯವಿಲ್ಲ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಹಾಗೂ ಆಕಳು-ಕರುವಿನ ಚಿತ್ರಗಳಿವೆ. “ ಪೃಥ್ವಿವಲ್ಲಭ ಮಹಾರಾಜಾಧಿರಾಜ…… ಮೇಶ್ವರ ಪರಮ ಭಟಾರಕ ಸತ್ಯ…. ಚಾಳುಕ್ಯಾಭರಣಂ….” ಎಂದು ರಾಜನನ್ನು ಹೊಗಳಲಾಗಿದೆ. “ಕವಿಲೆಯಂ ಬ್ರಾ…..ನರಮಂ ಅಳಿಲ ಪಾಪ ಸಾರ್‌….” ಎಂದು ಹೇಳುವ ಮೂಲಕ ಶಾಸನವನ್ನು ಕೆಡಿಸಬಾರದೆಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಜಗದೇಕಮಲ್ಲ ನೊಳಂಬ…. ಪರ್ಗಡೆ ನಾಗವರ್ಮನ ಹೆಸರುಗಳು ಶಾಸನದಲ್ಲಿ ಕಾಣಸಿಗತ್ತವೆ. ಶಿವನಗೌಡ ಪಾಟೀಲರ ಈಗಿರುವ ಮನೆಯನ್ನು ಕ್ರಿ.ಶ 1952ರಲ್ಲಿ ಬಿಚ್ಚಿ ಕಟ್ಟಿಸುವಾಗ ಮನೆಯ ತಲಬಾಗಿಲ ಕೆಳಗಿನ ಥರದಲ್ಲಿ ಹೂತುಹೊಗಿದ್ದ ಶಾಸನವನ್ನು ಹೊರತಗೆಯುವಾಗ ಮೂರು ತುಂಡುಗಳಾಗಿವೆ. ಒಂದು ತುಂಡು ಕಳೆದು ಹೋಗಿದೆ.
ಶಾಸನ ಶೋಧನೆಯ ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ.ಕಲವೀರ ಮನ್ವಾಚಾರ ಅವರು ಶಾಸನದ ಪಾಠವನ್ನು ಮೇಲಿನಂತೆ ಅರ್ಥೈಸಿದ್ದಾರೆ. ಸಂಶೋಧನಾ ವಿಧ್ಯಾರ್ಥಿ ಲೋಕಣ್ಣ ಭಜಂತ್ರಿ, ಡಾ.ರವೀಶ ಜಿ.ಎನ್‌, ಶಾಸನವನ್ನು ಕಾಪಾಡಿಕೊಂಡು ಬಂದಿರುವ ರಾಜೇಶ್ವರಿ ಪಾಟೀಲ ಹಾಗೂ ಗ್ರಾಮದ ಶಿಕ್ಷಕ ಅನಂತ ಧೋತ್ರೆ, ವೆಂಕಪ್ಪ ಶಂಕರಗೂಳಿ ಮೊದಲಾದವರು ಶಾಸನವನ್ನು ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಾಸನವನ್ನು ಇನ್ನೂ ಹೆಚ್ಚಿನ ಅಧ್ಯಯನಕ್ಕೊಳಪಡಿಸಿದರೆ ಕಲ್ಯಾಣ ಚಾಲುಕ್ಯರ ಇತಿಹಾಸ ಹಾಗೂ ಸುತ್ತಲಿನ ಗ್ರಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬಹುದೆಂದು ಶಿಕ್ಷಕ ಮಲ್ಲಿಕಾರ್ಜುನ ಅಂಗಡಿ (ಸೆಲ್‌ ನಂ: 9449260964,9141167852)ತಿಳಿಸಿದ್ದಾರೆ.

loading...