ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಅನಿವಾರ್ಯತೆ

0
31
loading...

ಕನ್ನಡಮ್ಮ ಸುದ್ದಿ-ಕಾರವಾರ: ಹಳ್ಳದಲ್ಲಿ ಸೊಂಟದೆತ್ತರಕ್ಕೆ ನೀರು ತುಂಬಿದ್ದರೂ ಲೆಕ್ಕಿಸದೇ ಅದರಲ್ಲಿ ಕಿ.ಮೀ ಕ್ರಮಿಸಿ ಕುಡಿಯುವ ನೀರು ತರುವ ಸಾಹಸಕ್ಕೆ ಇಲ್ಲಿನ ಕಿನ್ನರ ಗ್ರಾಪಂ ವ್ಯಾಪ್ತಿಯ ಜನರು ಇಳಿದಿದ್ದಾರೆ.
ಉ.ಕನ್ನಡ ಜಿಲ್ಲೆಯ ಕಾವಾರದ ಕಿನ್ನರ ಗ್ರಾಪಂ ವ್ಯಾಪ್ತಿಯ ಜನರು ಇಂದಿಗೂ ಕುಡಿಯೂ ನೀರಿಗಾಗಿ ಪರಿತಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.
200 ಮನೆಗಳಿಗೆ ನೀರಿನ ಸಮಸ್ಯೆ:ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗವಾಡಾ, ಚಾಮಕುಳಿವಾಡಾ, ಅಂಬೆಜೂಗ, ಝಾಡಕಿ ಭಾಗದ ಸುಮಾರು 200 ಮನೆಗಳು ನಿತ್ಯ ಕುಡಿಯುವ ನೀರಿನ ವೇದನೆಯಲ್ಲಿ ದಿನ ಕಳೆಯುತ್ತಿವೆ. ಅಂಬೇಜೂಗದ ಸುತ್ತಲೂ ನೀರಿದ್ದರು ಕಾಳಿ ನದಿ ಸಮುದ್ರ ಸೇರುವ ಸಂಗಮದ ಸಮೀಪದಲ್ಲಿರುವದರಿಂದ ಸಮುದ್ರದ ಉಪ್ಪು ನೀರು ನದಿಗೆ ನುಗ್ಗಿ ಹಳ್ಳದ ನೀರು ಉಪ್ಪಾಗುತ್ತಿದೆ. ಹೀಗಾಗಿ ದ್ವೀಪ ಗ್ರಾಮದಲ್ಲಿ ಸಾಕಷ್ಟು ನೀರಿದ್ದರೂ ಅವು ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ಗ್ರಾಮದಿಂದ ಸುಮಾರು 3 ಕಿ.ಮೀ ದೂರದ ದಿಗಾಳಿ ಬಳಿಯ ಹನುಮಾನ್‌ ಬಾವಿಯ ನೀರನ್ನು ಸಂಗ್ರಹಿಸಿ ಬಳಕೆ ಮಾಡುವುದು ಇಲ್ಲಿನ ಮಹಿಳೆಯರ ಕಾಯಕವಾಗಿದೆ.
ಕುಸಿದು ಬಿದ್ದ ಸೇತಿವೆ: ಅಂಬೇಜೂಗದಲ್ಲಿ ಈ ಮೊದಲು ಕಟ್ಟಿಗೆಯಿಂದ ನಿರ್ಮಿಸಿದ ಸೇತುವೆಯಿತ್ತು. ಈ ಭಾಗದ ಜನರು ಇದರ ಮೂಲಕವೇ ನಿತ್ಯ ಸಂಚರಿಸಿ ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ ನಾಲ್ಕೈದು ವರ್ಷದ ಹಿಂದೆ ಸೇತುವೆ ಕುಸಿದು ಬಿದ್ದಿದ್ದು, ಎರಡು ದಡಗಳ ಸಂಪರ್ಕ ಕಡಿತಗೊಂಡಿದೆ. ಬಳಿಕ ಸೇತುವೆ ನಿರ್ಮಾಣ ಮಾಡಿಲ್ಲ. ಇದರಿಂದ ಈ ಭಾಗದ ಜನರು ಸಂಚಾರ ಮಾಡಬೇಕೆಂದರೇ ಸುಮಾರು 3 ಕಿ.ಮೀ ಸುತ್ತಿ ತೆರಳಬೇಕು. ಇಲ್ಲವಾದಲ್ಲಿ ಹಳ್ಳದಲ್ಲಿ ದಾಟುವುದು ಅನಿವಾರ್ಯವಾಗಿದೆ.
ಗ್ರಾಮದ ಕೆಲ ಮನೆಗಳಲ್ಲಿ ಬಾವಿಗಳಿದ್ದರು ಉಪ್ಪು ನೀರು ನುಗ್ಗುವ ಕಾರಣ ಬಳಕೆಯಾಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಮಹಿಳೆಯರು ನಿತ್ಯ ಅಲೆದಾಡುವ ಸ್ಥಿತಿ ಇದೆ. ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಗ್ರಾಮಕ್ಕೆ ಸೂಕ್ತ ಸೇತುವೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

loading...