ಕೇಂದ್ರ ಸಚಿವ ಅನಂತ ಹೆಗಡೆ ವಿರುದ್ಧ ಪ್ರತಿಭಟನೆ

0
11
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸ್ಥಳೀಯ ಘಟಕ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಜ.23 ರಂದು ಪ್ರತಿಭಟನೆ ನಡೆಸಿದರು.
ಶಿವಾಜಿ ವೃತ್ತದಲ್ಲಿ ಹೆದ್ದಾರಿ ಮೇಲೆ ಧಿಕ್ಕಾರದ ಘೋಷಣೆಗಳನ್ನು ಹಾಕಿದ ನಂತರ ಸಚಿವ ಅನಂತ ಹೆಗಡೆ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ನಂತರ ಹಲಗಿ ವಾದ್ಯ ಬಾರಿಸುತ್ತಾ ತಾಲೂಕಾ ಕಚೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿಪತ್ರವನ್ನು ತಾಲೂಕಾ ಕಚೇರಿ ಶಿರಸ್ತೇದಾರ ಅನಂತ ಚಿಪ್ಪಲಕಟ್ಟಿ ಅವರಿಗೆ ಸಲ್ಲಿಸಲಾಯಿತು.
ಸಂವಿಧಾನವನ್ನು ಬದಲಿಸಲು ತಾವು ಅಧಿಕಾರಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿ ಈ ಕುರಿತು ಲೋಕಸಭೆ ಅಧಿವೇಶನದಲ್ಲಿ ಕ್ಷಮೆಯಾಚಿಸಿದ ಅವರು ಕೆಲ ದಿನಗಳ ಹಿಂದೆ ಬಳ್ಳಾರಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ದಲಿತ ಸಮುದಾಯದವರು ಅವರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ತೋರಿಸಿದ ಕಾರಣ ಬೀದಿಯಲ್ಲಿ ನಾಯಿಗಳು ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವಹೇಳನಕಾರಿಯಾಗಿ ಮಾತನಾಡಿ ದಲಿತ ಸಮುದಾಯಕ್ಕೆ ನೋವುಂಟು ಮಾಡುತ್ತಿರುವ, ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವುದರಿಂದ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘಟನೆಗಳ ಪ್ರಮುಖರಾದ ಪೀಶಪ್ಪಾ ಕ. ಮೇತ್ರಿ, ಎಚ್.ಎ. ಪೀಶಣ್ಣಾ, ರಾಜು ಮೇತ್ರಿ, ವಿಲಾಸ ಕಣಗಲಿ, ಅಂತೋನ ಡಿಗ್ಗೆಕರ, ಯಲ್ಲಪ್ಪಾ ಹೊನ್ನೋಜಿ, ಮಂಜುನಾಥ ಚಲವಾದಿ, ಮಾರುತಿ ಕಲಬಾವಿ, ಸುಭಾಸ ಕೋಲಕರ ಮೊದಲಾದವರು ಪಾಲ್ಗೊಂಡಿದ್ದರು

loading...