ಗುಣಾತ್ಮಕ ಶಿಕ್ಷಣದಿಂದ ಮಹಿಳಾ ಸಬಲೀಕರಣ ಸಾಧ್ಯ

0
35
loading...

ಗದಗ: ಯುವತಿಯರಿಗೆ ಗುಣಾತ್ಮಕ ಶಿಕ್ಷಣ, ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದಿಂದ ಮಹಿಳಾ ಸಬಲೀಕರಣ ಸಾಕಾರಗೊಳ್ಳಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ರೇಣುಕಾ ಜಿ.ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಗದುಗಿನ ಮರಾಠಾ ವಿದ್ಯಾವರ್ಧಕ ಸಂಘದ ಸಮುದಾಯ ಭವನದಲ್ಲಿ ಡೆವಲಪ್‌ಮೆಂಟ್‌ ಎಜ್ಯುಕೇಶನ್‌ ಸರ್ವಿಸ್‌ (ಡೀಡ್ಸ್‌), ಗದಗ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ, ಸಹಭಾಗಿ ಸ್ವಯಂ ಸೇವಾ ಸಂಸ್ಥೆಗಳಿಂದ ನಡೆದ 2ನೇ ಹಂತದ ಪೂರಕ ಕಾನೂನು ಸುಗಮಕಾರರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಬಹುತೇಕ ಸಮಸ್ಯೆಗಳು ಇತ್ಯರ್ಥಗೊಳ್ಳುವವು. ಕುಟುಂಬ ನಿರ್ವಹಣೆಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಮಹಿಳೆ ಇಂದು ಸಾಕಷ್ಟು ಹೆಣಗಾಡುವಂತಾಗಿದೆ. ಮಹಿಳೆಯರು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕು, ಮಾನಸಿಕ ಒತ್ತಡಗಳನ್ನು ಸಹಜವಾಗಿ ನಿಭಾಯಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಆವೇಶಕ್ಕೆ ಒಳಗಾಗದೇ ಶಾಂತಚಿತ್ತದಿಂದ ಪರಿಹಾರದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೆಂದರು.
ಮಹಿಳಾ ಸ್ವಯಂ ಸೇವಾ ಸಂಸ್ಥೆಗಳು ನೊಂದ ಮಹಿಳೆಗೆ ಸಾಂತ್ವನ ಹೇಳುವ ಮೂಲಕ ನಿನ್ನೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಮಹಿಳೆಯರು ಜಾಗೃತರಾಗಬೇಕು, ವಿದ್ಯಾವಂತರಾಗಬೇಕು. ಕಾಯ್ದೆ ಕಾನೂನುಗಳು ಮಹಿಳೆಗೆ ಉತ್ತಮ ಭವಿಷ್ಯ ರೂಪಿಸಲು ಸ್ವಾವಲಂಭನೆಯ ಬದುಕು ರೂಪಿಸಿಕೊಳ್ಳಲು ರೂಪಿತಗೊಂಡಿವೆ ಎಂದರಲ್ಲದೆ ಮಹಿಳಾ ಸಂಘಟನೆಗಳು ಮಹಿಳೆಯರಲ್ಲಿ ಜಾಗೃತಿ, ವೈಚಾರಿಕ ಪ್ರಜ್ಞೆ, ಕಾನೂನು ಪರಿಕಲ್ಪನೆ ಮೂಡಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರಿನ ಡೀಡ್ಸ್‌ ನಿರ್ದೆಶಕಿ ಮರ್ಲಿನ್‌ ಮಾರ್ಟಿಸ್‌ ಅವರು ಮಹಿಳೆಯರ ಬದುಕನ್ನು ಸುಂದರವಾಗಿ ರೂಪಿಸುವ ನಿಟ್ಟಿನಲ್ಲಿ ಡೀಡ್ಸ್‌ ಸಂಸ್ಥೆ ಸಾಕಷ್ಟು ರೀತಿಯಲ್ಲಿ ಕ್ರಿಯಾಶೀಲತೆಯಿಂದ ಕಾರ್ಯ ಮಾಡುತ್ತಿದೆ. ವಿವಿದ ಜಿಲ್ಲೆಗಳಲ್ಲಿ ಮಹಿಳೆಯರಿಗೆ, ಮಹಿಳಾ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳಿಗೆ, ಸದಸ್ಯರಿಗೆ ವಿಶೇಷ ತರಬೇತಿ, ಕಾರ್ಯಾಗಾರಗಳನ್ನು ನೀಡುವ ಮೂಲಕ ಮಹಿಳಾಮುಖಿ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನದ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಬೆಟಗೇರಿ ಅವರು ಸ್ವಾಗತಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಮಹಬೂಬ ಗೋಕಾವಿ, ಉಷಾ ನಾಲ್ವಾಡ, ಶೀಖಾ ಬಂಡಿ, ತಾಯಕ್ಕ, ಶಂಕ್ರಣ್ಣ, ಅಶ್ವಿನಿ ಹಾಗೂ ರೇಣುಕಾ ಅವರು ಶಿಬಿರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ರೇಖಾ ಶಿಗ್ಲಿಮಠ, ಮಂಜುಳಾ ಮಲ್ಲಾಪೂರ, ಅಕ್ಕಮಹಾದೇವಿ ಹಿರೇಮಠ, ರೇಣುಕಾ ಹಂದ್ರಾಳ, ಶಾರದಾ ಇಂಗಳಳ್ಳಿ, ಜಯಶ್ರೀ ಹಿರೇಮಠ, ಲಲಿತಾ ಸಂಗನಾಳ ಅವರನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಜಿ.ಕುಲಕರ್ಣಿ ವಿಶೇಷವಾಗಿ ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಡೀಡ್ಸ್‌ನ ಗದಗ ಜಿಲ್ಲಾ ಸಂಯೋಜಕಿ ಫಕ್ಕೀರಮ್ಮ ಲಕ್ಕುಂಡಿ ಅವರು ನಿರೂಪಿಸಿದರು ಕೊನೆಗೆ ಮಂಗಳೂರು ಡೀಡ್ಸ್‌ ಸಂಸ್ಥೆಯ ತರಬೇತಿ ಸಂಯೋಜಕ ತುಕಾರಾಮ ಎಕ್ಕಾರು ವಂದಿಸಿದರು. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸುಮಾರು 50 ಕ್ಕೂ ಹೆಚ್ಚು ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೋಂಡಿದ್ದರು.

loading...