ಜನರ ಮನ ಸೆಳೆದ ವಿಭೂತಿ ಜಲಪಾತ

0
28
loading...

ಕನ್ನಡಮ್ಮ ಸುದ್ದಿ-ಶಿರಸಿ: ಬಣ್ಣ ಬಣ್ಣದ ಫೇವರ್ಸ್‌ ಹಾಸಿದ ದಾರಿಯಲ್ಲಿ ಫರ್ಲಾಂಗು ದೂರ ನಡೆದರೆ ಕಾಡಿನ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. ಮುಗಿಲಿಗೆ ಮುಖಮಾಡಿರುವ ಬೃಹದಾಕಾರದ ಮರದ ಕೆಳಗಿನ ಹೆಜ್ಜೆ ಸವೆಸಿದ ದಾರಿಯಲ್ಲಿ ಮರದ ತುಂಡಿನಂತೆ ಕಾಣುವ ಮೆಟ್ಟಿಲುಗಳು, ಆಸನಗಳು ಮುಂದೆ ಸಾಗಿರೆನ್ನುವ ಸೂಚನೆ ನೀಡುತ್ತವೆ. ಏರು, ತಗ್ಗಿನ ಹಾದಿಯಲ್ಲಿ ಏದುಸಿರುವ ಬಿಡುತ್ತ ಹೋದರೆ ಇನ್ನೇನು ಜಲಪಾತ ಬಂದೇ ಬಿಟ್ಟೀತು ಎಂದು ಭೋರ್ಗರೆವ ಸದ್ದನ್ನು ಕೇಳಿದ ಕಿವಿ, ಕಾಲಿಗೆ ಸಮಾಧಾನ ಹೇಳುತ್ತದೆ. ನಡೆದಿದ್ದು ಅರ್ಧ ಕಿ.ಮೀ ಮಾತ್ರ ಆಗಿದ್ದರೂ, ಎರಡು ಕಿ.ಮೀ ನಡೆದಷ್ಟು ಸುಸ್ತು. ಆದರೆ ಹಸಿರು ಕಾರ್ಪೆಟ್‌ ನಡುವಿನಿಂದ ಧುಮ್ಮಿಕ್ಕುವ ಬಿಳಿನೊರೆಯ ಧಾರೆ ಆಯಾಸವನ್ನೆಲ್ಲ ಕ್ಷಣಮಾತ್ರದಲ್ಲಿ ಮರೆಸುತ್ತದೆ !
ಸುತ್ತಲಿನ ಕೃಷಿ ಜಮೀನು, ನೈಸರ್ಗಿಕ ಅರಣ್ಯಕ್ಕೆ ಜೀವಜಲ ಈ ವಿಭೂತಿ. ಈ ಜಲಪಾತದ ಸೌಂದರ್ಯ ಸವಿಯಲು ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಸರ್ಕಾರಿ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ. ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಅರಣ್ಯ ಇಲಾಖೆ ಈ ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಿದೆ. ‘ವಿಭೂತಿ ಫಾಲ್ಸ್‌ಗೆ ಪ್ರವಾಸಿಗರು ತರುವ ವಾಹನಗಳನ್ನು ನಿಲ್ಲಿಸಲು ಪ್ರಸ್ತುತ ಇರುವ ಜಾಗ ಸಾಕಾಗುತ್ತಿಲ್ಲ. ವಾಹನ ನಿಲುಗಡೆ ಸ್ಥಳವನ್ನು ವಿಸ್ತಾರಗೊಳಿಸಬೇಕು. ಇಲ್ಲವಾದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿಯೇ ಪ್ರವಾಸಿಗರು ಕಾರನ್ನು ನಿಲ್ಲಿಸಿ ಹೋಗುತ್ತಾರೆ’ ಎನ್ನುತ್ತಾರೆ ಸ್ಥಳೀಯ ಮುಖಂಡ ಜಿ.ಎಂ. ಶೆಟ್ಟಿ.
‘ನಾವು ಒಂಬತ್ತು ಜನರು ಸೇರಿ ಈ ಭಾಗದ ಪ್ರವಾಸಿ ತಾಣಗಳನ್ನು ನೋಡಲು ಬಂದಿದ್ದೆವು. ನಮ್ಮಲ್ಲಿ ಮಂಜು ಅಧಿಕ. ಇಲ್ಲಿನ ಹವಾಮಾನ ನಮಗೆ ತುಂಬ ಇಷ್ಟವಾಯಿತು. ನಮ್ಮ ಜೊತೆಗೆ ಬಂದವರೆಲ್ಲ ವಿಭೂತಿ ಜಲಪಾತದ ತಟದಲ್ಲಿ ಮನಸ್ಸು ತೃಪ್ತಿಯಾಗುವಷ್ಟು ಈಜಾಡಿದರು’ ಎಂದು ರಷ್ಯಾದಿಂದ ಬಂದಿದ್ದ ಸ್ವಿಟ್ಲಾನಾ ಪ್ರತಿಕ್ರಿಯಿಸಿದರು.

loading...